ಕನ್ನಡಪ್ರಭ ವಾರ್ತೆ ಸಿರಿಗೆರೆಕರ್ನಾಟಕದಲ್ಲಿ ಅನ್ನದಾನ ಮತ್ತು ವಿದ್ಯಾದಾನವನ್ನು ಮಾಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ. ಮಠಗಳು ಅಕ್ಷರವಂಚಿತ ಸಮುದಾಯಗಳಿಗೆ ಶಕ್ತಿ ನೀಡಿವೆ. ತರಳಬಾಳು ಮಠದ ಶಿವಕುಮಾರ ಶ್ರೀಗಳು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಜ್ಞಾನದ ದೀವಿಗೆಯನ್ನು ನೀಡಿದವರು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಶುಕ್ರವಾರ ನಡೆದ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ 32 ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶ್ರೀಗಳು ಕಠೋರವಾದ ನಡೆನುಡಿಯುಳ್ಳವರಾಗಿದ್ದರು. ಹೃದಯಾಂತರಾಳದಲ್ಲಿ ಕೋಮಲವಾಗಿದ್ದರು. ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ದ ಗುರುವಾಗಿದ್ದರು ಎಂದು ಸ್ಮರಿಸಿಕೊಂಡರು.ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹ ಮೂರ್ತಿ ಮಾತನಾಡಿ, ವಚನ ಸಾಹಿತ್ಯ ಓದಲು ಯಾರ ನೆರವೂ ಬೇಡ. ವಚನ ಸಾಹಿತ್ಯ ಅತ್ಯಂತ ಸರಳವಾದ್ದು, ನೇರವಾಗಿದೆ. ಆ ಕಾಲದ ಸಾಹಿತ್ಯ ಅತ್ಯದ್ಭುತ. 22 ಸಾವಿರ ವಚನಗಳನ್ನು ಅಂತರ್ಜಾಲಕ್ಕೆ ಅಳವಡಿಸಿ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಹತ್ತರ ಸಾಧನೆ ಮಾಡಿದ್ದಾರೆ ಎಂದರು.ಬಸವಣ್ಣನವರ ತತ್ವಗಳನ್ನು ಆದರ್ಶನೀಯವಾಗಿ ಪಾಲನೆ ಮಾಡಿದ ಶ್ರೀಗಳಲ್ಲಿ ಶಿವಕುಮಾರ ಶ್ರೀ ಅಗ್ರಗಣ್ಯರಾಗಿದ್ದಾರೆ. ಅವರು ಗ್ರಾಮಾಂತರ ಭಾಗಗಳಲ್ಲಿ ಅಕ್ಷರಕ್ರಾಂತಿ ಮಾಡಿದವರು ಎಂದು ತಿಳಿಸಿದರು.
ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ ನೀಡುವಂತಹ ಕೆಲಸ ತರಳಬಾಳು ಮಠದಿಂದ ಆಗಿದೆ. ಧಾರ್ಮಿಕತೆಗೆ ಸೀಮಿತವಾಗದೆ ಜನರ ಬದುಕಿಗೆ ಬೇಕಾದ ಎಲ್ಲಾ ರಂಗಗಳಲ್ಲಿಯೂ ತರಳಬಾಳು ಮಠ ಕೆಲಸ ಮಾಡುತ್ತಿದೆ. ತ್ರಿವಿಧ ದಾಸೋಹದ ಜತೆಗೆ ನ್ಯಾಯದಾನದ ಕೆಲಸ ನಡೆಯುತ್ತಾ ಬಂದಿದೆ ಎಂದರು.ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ದಾವಣಗೆರೆ ಭಾಗದ 22 ಕೆರೆಗಳಿಗೆ ನೀರು ತುಂಬುವ ಏತ ನೀರಾವರಿ ಯೋಜನೆ ಕಳಪೆ ಕಾಮಗಾರಿಯಿಂದ ವಿಫಲವಾಗಿದೆ. ಆ ಕಾರ್ಯವನ್ನು ಮತ್ತೆ ಕೈಗೆತ್ತಿಕೊಳ್ಳಲು ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ ಬದ್ಧರಾಗಿದ್ದಾರೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೂ ಆಸಕ್ತಿ ಹೊಂದಿದ್ದಾರೆ. ಈ ಕೆಲಸವನ್ನು ಪುನಃ ಆರಂಭಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಆದ್ರಿಕಟ್ಟೆಯ ಬಸವರಾಜ್ ಗಿರಿಯಾಪುರ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್ ಮಾತನಾಡಿದರು.ಸಿರಿಗೆರೆ ಅಕ್ಕನ ಬಳಗ ತಂಡದವರು ವಚನ ಗೀತೆಗಳನ್ನು ಹಾಡಿದರು. ಭರತನಾಟ್ಯ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದವರಿಗೆ ಬಹುಮಾನ ವಿತರಿಸಲಾಯಿತು. ಎಂ.ಎಸ್. ಸೋಮಶೇಖರ್ ಸ್ವಾಗತಿಸಿದರು. ಎಂ. ರಂಗಣ್ಣ ನಿರೂಪಿಸಿದರು.