ಮುಂಡರಗಿ: ತಾಲೂಕಿನಲ್ಲಿ ಭೀಕರವಾದ ಬರಗಾಲ ಛಾಯೆ ಎದ್ದು ಕಾಣುತ್ತಿದ್ದು, ಸರ್ಕಾರ ತಕ್ಷಣವೇ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ದನ-ಕರುಗಳ ಉಳುವಿಗಾಗಿ ತಾಲೂಕಿನ ವಿವಿಧೆಡೆಗಳಲ್ಲಿ ಗೋ ಶಾಲೆಗಳನ್ನು ತೆರೆಯವಂತಾಗಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಒತ್ತಾಯಿಸಿದರು.
ಹಿಂದೆ ಎಸ್.ಎಸ್. ಪಾಟೀಲ ಅವರು ಸಚಿವರಾಗಿದ್ದಾಗ ಸರ್ಕಾರದಿಂದ ನದಿ ತೀರದಲ್ಲಿನ ರೈತರಿಗೆ ಉಚಿತವಾಗಿ ಹುಲ್ಲು ಬೀಜ ನೀಡಿ ಅವರಿಗೆ ₹10 ಸಾವಿರ ಧನಸಹಾಯ ಮಾಡಿ ಹುಲ್ಲು ಬೆಳೆಯಲು ಹಚ್ಚಿದ್ದರು. ಇದರಿಂದ ರೈತರು ಹುಲ್ಲು ಬೆಳೆಯುತ್ತಾರೆ. ಜಾನುವಾರುಗಳಿಗೆ ಮೇವು ಸಿಗುತ್ತದೆ. ಹೀಗಾಗಿ, ಈಗಿನ ಸರ್ಕಾರ ಆ ರೀತಿ ಯೋಜನೆಗೆ ಮುಂದಾಗಬೇಕು. ಕಪ್ಪತಗುಡ್ಡದಲ್ಲಿ ಪ್ರತಿವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತಿದ್ದು, ಜಿರಾಮ್‌ಜಿ ಗ್ರಾಮೀಣ ಯೋಜನೆಯಲ್ಲಿ ಗುಡ್ಡದಲ್ಲಿ ಬೆಳೆದ ಹುಲ್ಲನ್ನು ಕಟಾವ್ ಮಾಡಿಸಿಕೊಂಡು ಸಂಗ್ರಹಿಸುವ ಕಾರ್ಯ ಮಾಡಹೇಕು. ನೀರಿನ ಉಳಿತಾಯ ಯೋಜನೆ ಹಾಕಿಕೊಳ್ಳಬೇಕು. ಜಿರಾಮ್‌ಜಿ ಗ್ರಾಮೀಣ ಯೋಜನೆಯಲ್ಲಿ ಎಲ್ಲ ಕೂಲಿಕಾರ್ಮಿಕರಿಗೆ ಕೆಲಸ ಕೊಡಬೇಕು ಎಂದರು.
ಮಳೆ, ಚಳಿ, ಗಾಳಿ ಲೆಕ್ಕಿಸದೇ ಕೃಷಿಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ರೈತರ ಬದುಕು ಇದೀಗ ಅತಂತ್ರ ಮತ್ತು ತೊಂದರೆಗೆ ಸಿಲುಕಿಕೊಂಡಿದೆ. ಕಾರಣ ಮುಂಗಾರು ಹಂಗಾಮು ಸಂಪೂರ್ಣ ಕೈಕೊಟ್ಟಿದ್ದು, ಬಿತ್ತಿದ ಬೆಳೆಗಳು ಅಲ್ಲಿಯೇ ಕಮರಿ ಹೋಗಿವೆ. ಅಲ್ಪಸ್ವಲ್ಪ ಚಿಗುರೊಡೆ ಬೆಳೆಗಳು ನೆಲ ಕಚ್ಚಿವೆ. ಹೀಗಾಗಿ, ಸರ್ಕಾರ ತಕ್ಷಣವೇ ಅನ್ನದಾತರ ನೆರವಿಗೆ ಧಾವಿಸುವುದು ಅತ್ಯಂತ ಅವಶ್ಯವಾಗಿದೆ. ರೈತರು ತಮ್ಮ ಬೆಳೆ ವಿಮೆಯನ್ನು ಏಜೆಂಟರ್ ಮೂಲಕ ತುಂಬದೆ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿರುವ ಕೌಂಟರ್ ಗಳ ಮೂಲಕ ತುಂಬಬೇಕು. ಸಾಲ ಪಡೆದ ಮತ್ತು ಪಡೆಯದೆ ಇರುವ ರೈತರು ಸಹಕಾರ ಸಂಘಗಳಲ್ಲಿ ಬೆಳೆವಿಮೆ ಮಾಡಿಸುವುದರಿಂದ ರೈತರಿಗೆ ಅನ್ಯಾಯವಾಗುವದಿಲ್ಲ.ಧಾರವಾಡ ಕೆಸಿಸಿ ಬ್ಯಾಂಕಿನ 63 ಶಾಖೆಗಳಲ್ಲಿ ಹಾಗೂ ಅದರ ವ್ಯಾಪ್ತಿಯ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ 543 ಸಹಕಾರ ಸಂಘಗಳ ಮೂಲಕ ಬೆಳೆ ವಿಮೆ ಹಣವನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆಗೆ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಹಕರಿಸಿ ಅನುಕೂಲ ಮಾಡಿದ್ದಾರೆ. ಕೆಸಿಸಿ ಬ್ಯಾಂಕ್ ವತಿಯಿಂದ ಹಾವೇರಿ ಗದಗ ಧಾರವಾಡ ಜಿಲ್ಲೆಯ 84 ಸಾವಿರ ರೈತರಿಗೆ ಈಗಾಗಲೇ ಬೆಳೆಸಾಲ ನೀಡಲಾಗಿದೆ. ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳೆ ವಿಮೆ ತುಂಬಲು ಕೆಲ ಬೆಳೆಗಳಿಗೆ ಆ. 15 ಹಾಗೂ ಜು. 31ರ ವರೆಗೆ ಅವಧಿ ವಿಸ್ತರಿಸಿದ್ದು, ಅವರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸುವೆ. ಆದರೆ, ಇನ್ನೂ ಅನೇಕ ಜನ ಉಳಿದಿದ್ದು, ಈ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಶಿವಕುಮಾರಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಪುರಸಭೆ ಮಾಜಿ ಉಪಾಧ್ಯಕ್ಷ ಶಿವನಗೌಡ ಗೌಡರ, ಭೀಮಸಿಂಗ್ ರಾಠೋಡ, ಎಸ್.ವಿ. ಪಾಟೀಲ, ಎಸ್.ಬಿ. ಪಾಟೀಲ, ಎಸ್.ಎನ್. ಪಾಟೀಲ, ದೇವಪ್ಪ ಕುಕನೂರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.