ಕನ್ನಡಪ್ರಭ ವಾರ್ತೆ ಮೈಸೂರು
ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ನಗರ ಪಾಲಿಕೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖ ಶರಣರು, ಬಸವಣ್ಣನವರ ನಿಜಾತ್ಮ ಹಾಗೂ ಆಪ್ತ ಕಾರ್ಯದರ್ಶಿಯಾಗಿದ್ದ. ಅಪ್ಪಣ್ಣನವರು ಶರಣರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಬದ್ಧರಾಗಿದ್ದದವರು ಎಂದರು.
ಬಸವಣ್ಣನವರ ಜೊತೆ ನೆರಳಿನಂತೆ ಇರುತ್ತಿದ್ದ ಅಪ್ಪಣ್ಣನವರು, ಅನುಭವ ಮಂಟಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಬಸವಣ್ಣನವರು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಅಪ್ಪಣ್ಣನವರ ಆಲೋಚನೆ ಹಾಗೂ ಸಲಹೆ ಗೌರವಿಸುತ್ತಿದ್ದರು. ಅಪ್ಪಣ್ಣನವರು ಕೇವಲ ಕಾಯಕಯೋಗಿಯಾಗಿರಲಿಲ್ಲ, ಅವರೊಬ್ಬ ಶ್ರೇಷ್ಠ ವಚನಕಾರರೂ ಆಗಿದ್ದರು. ‘ಬಸವಪ್ರಿಯ ಕೂಡಲಚನ್ನಸಂಗಮದೇವ’ ಎಂಬ ಅಂಕಿತನಾಮದಲ್ಲಿ ಸುಮಾರು 240ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿದ್ದ ಜಾತಿ ಪದ್ಧತಿ, ಅಸಮಾನತೆ ಹಾಗೂ ಮೂಢನಂಬಿಕೆಯನ್ನು ತಮ್ಮ ವಚನಗಳ ಮೂಲಕ ತೀವ್ರವಾಗಿ ಖಂಡಿಸಿದ್ದಾಗಿ ಅವರು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಹಡಪದ ಅಪ್ಪಣ್ಣನವರು ನಿಷ್ಠೆ, ಪ್ರಾಮಾಣಿಕತೆ ಹಾಗೂ ಇಡೀ ಸಮಾಜವನ್ನು ಜಾಗೃತಗೊಳಿಸಿ ಬದಲಾಯಿಸಬೇಕು ಎಂಬ ಸ್ಪಷ್ಟ ಚಿಂತನೆ ಹೊಂದಿದ್ದ ಮಹಾನ್ ವ್ಯಕ್ತಿ. ಅವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರ ಧರ್ಮಪತ್ನಿಯೂ ಕೂಡ ಪ್ರಸಿದ್ಧ ವಚನಕಾರ್ತಿಯಾಗಿದ್ದರು. ಇಂತಹ ಮಹಾನ್ ಚೇತನವು ನಮ್ಮ ಸಮಾಜದಲ್ಲಿ ಜನಿಸದೇ ಹೋಗಿದ್ದರೆ, ಸಮಾಜವು ಅಂಧಕಾರದಲ್ಲಿಯೇ ಉಳಿದು ನಾಶವಾಗುತ್ತಿತ್ತು ಎಂದರು.
ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಸಮಾಜದಲ್ಲಿದ್ದ ವೃತ್ತಿ ಆಧಾರಿತ ಮೇಲು-ಕೀಳು ಭಾವನೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು.
ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಜ್ಞಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ್ದಾಗಿ ಹೇಳಿದರು.
ಹಡಪದ ಅಪ್ಪಣ್ಣ ಅವರ ಧರ್ಮಪತ್ನಿ ಲಿಂಗಮ್ಮನವರೂ ಕೂಡ ಶ್ರೇಷ್ಠ ವಚನಕಾರ್ತಿಯಾಗಿದ್ದು, ಅಪ್ಪಣ್ಣನವರೊಡನೆ ಹೆಗಲಿಗೆ ಹೆಗಲು ಕೊಟ್ಟು ಶರಣ ಚಳವಳಿಯಲ್ಲಿ ಭಾಗವಹಿಸಿದ್ದಾಗಿ ಹೇಳಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ಮಾತನಾಡಿ, ಈ ಜಗತ್ತು ಎಂದಿಗೂ ಮರೆಯಲಾಗದ ಮಹಾನ್ ಚೇತನವೆಂದರೆ ಅದು ಬಸವಣ್ಣ ಹಾಗೂ ಅಪ್ಪಣ್ಣ, ಅವರುಗಳು ನೀಡಿದ ಮಾರ್ಗದರ್ಶನ ನಮ್ಮೆಲ್ಲರಿಗೂ ಸದಾ ಮಾದರಿ ಆಗಬೇಕು ಎಂದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್, ಪರಿವರ್ತನಾ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್. ಧನಂಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು.