ಪರಿವರ್ತನೆ ಎಂಬುದು ಸಮಾಜ ಹಾಗೂ ರಾಷ್ಟ್ರದ ಒಳಿತಿನ ದಾರಿ: ಪ್ರೊ.ರಾಮಾನುಜಮ್‌ ಮೇಘನಾಥನ್‌

KannadaprabhaNewsNetwork |  
Published : Jul 30, 2026, 01:15 AM IST
1 | Kannada Prabha

ಸಾರಾಂಶ

ಸಾಮಾನ್ಯರು ತಮ್ಮ ಜ್ಞಾನ ವೃದ್ಧಿಗೆ ಶಿಕ್ಷಮ ಪಡೆಯುತ್ತಾರೆ. ಆದರೆ ವಾಕ್‌ ಮತ್ತು ಶ್ರವಣದೋಷ ಉಳ್ಳವರ ಪಾಲಿಗೆ ಶಿಕ್ಷಣವು ಅವರ ಜೀವನವನ್ನೇ ಬದಲಿಸಲಿದೆ. ಶಿಕ್ಷಣ ಎಂಬುದು ಬದಲಾವಣೆಯ ಸಾಧನವಲ್ಲ. ಅದು ಪರಿವರ್ತನೆಯ ಸಾಧನ. ಬದಲಾವಣೆಯನ್ನು ಎಲ್ಲರೂ ಬಯಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಬದಲಾವಣೆ ಎನ್ನುವುದು ಒಳ್ಳೆಯದಕ್ಕೂ ಆಗಬಹುದು, ಕೆಟ್ಟದ್ದಕ್ಕೂ ಆಗಬಹುದು. ಆದರೆ ಪರಿವರ್ತನೆ ಎಂದರೆ ಸದಾ ವ್ಯಕ್ತಿಯ, ಸಮಾಜದ ಹಾಗೂ ರಾಷ್ಟ್ರದ ಒಳಿತಿನ ದಾರಿ ಎಂದು ಎನ್‌.ಸಿ.ಇ.ಆರ್‌.ಟಿಯ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಮುಖ್ಯಸ್ಥ ಪ್ರೊ. ರಾಮಾನುಜಮ್‌ ಮೇಘನಾಥನ್‌ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್‌ ವಾಕ್‌ ಮತ್ತು ಶ್ರವಣ ಸಂಸ್ಥೆ ವತಿಯಿಂದ ಬುಧವಾರ ನಡೆದ ಪದವೀಧರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಮಾನ್ಯರು ತಮ್ಮ ಜ್ಞಾನ ವೃದ್ಧಿಗೆ ಶಿಕ್ಷಮ ಪಡೆಯುತ್ತಾರೆ. ಆದರೆ ವಾಕ್‌ ಮತ್ತು ಶ್ರವಣದೋಷ ಉಳ್ಳವರ ಪಾಲಿಗೆ ಶಿಕ್ಷಣವು ಅವರ ಜೀವನವನ್ನೇ ಬದಲಿಸಲಿದೆ. ಶಿಕ್ಷಣ ಎಂಬುದು ಬದಲಾವಣೆಯ ಸಾಧನವಲ್ಲ. ಅದು ಪರಿವರ್ತನೆಯ ಸಾಧನ. ಬದಲಾವಣೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಪರಿವರ್ತನೆ ಸಾಧಿಸಲು ಕೆಲವೇ ಜನರು ಮಾತ್ರ ಶ್ರಮಿಸುತ್ತಾರೆ. ಹೀಗಾಗಿ ನಿಜವಾದ ಪರಿವರ್ತನೆ ವ್ಯಕ್ತಿಯಲ್ಲೂ, ಸಮಾಜದಲ್ಲೂ ಮತ್ತು ಜಗತ್ತಿನಲ್ಲೂ ಉತ್ತಮ ಬದಲಾವಣೆಯನ್ನು ತರುತ್ತದೆ. ಆದ್ದರಿಂದ ಶಿಕ್ಷಣ ಪಡೆದಾಗ ಈ ಹಾದಿಯಲ್ಲಿ ಸಾಧನೆ ಸಾಧ್ಯವಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಾನವನ ಸಂವಹನಕ್ಕಾಗಿ ಅನೇಕ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಜ್ಞಾ ಭಾಷೆ, ಬ್ರೈಲ್ ಲಿಪಿ, ವಿವಿಧ ಸಹಾಯಕ ತಂತ್ರಜ್ಞಾನಗಳು ಸಂವಹನದ ಶಕ್ತಿಯನ್ನು ವಿಸ್ತರಿಸಿವೆ. ಆದ್ದರಿಂದ, ವಿಶೇಷವಾಗಿ ನಾವೆಲ್ಲರೂ ಜನರನ್ನು, ಪ್ರಕ್ರಿಯೆಗಳನ್ನು ಮತ್ತು ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು, ವ್ಯಾಖ್ಯಾನಿಸಲು ಹಾಗೂ ಉತ್ತಮಗೊಳಿಸಲು ಪ್ರಯತ್ನಿಸಬಹುದು ಎಂದು ಅವರು ಹೇಳಿದರು.

ಒಂದು ಕಾಲದಲ್ಲಿ ಅಂಗವೈಕಲ್ಯವನ್ನು ದೈವದ ಶಾಪವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಮಾನವೀಯ ಚಿಂತನೆ, ವಿಜ್ಞಾನ, ಶಿಕ್ಷಣ ಮತ್ತು ಸಮಾನ ಹಕ್ಕುಗಳ ತತ್ವಗಳು ಆ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಇದರಿಂದಾಗಿ ಕರುಣಾಮ, ಸಮಾನತೆಯ ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುವ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದರು.

ಸಂವಹನವು ಎನ್ನುವುದು ಕೇವಲ ಮಾತಿನ ಕ್ರಿಯೆಯಲ್ಲ. ಅದು ಚಿಂತನೆ, ಕಲ್ಪನೆ, ಭಾವನೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಮಗ್ರ ಪ್ರಕ್ರಿಯೆ. ನಾವು ಮಾತಿನ ಮೂಲಕ ಸುಲಭವಾಗಿ ಸಂವಹನ ನಡೆಸುವಾಗ ಅದರ ಮಹತ್ವವನ್ನು ಅಷ್ಟಾಗಿ ಅರಿಯುವುದಿಲ್ಲ. ಆದರೆ ಮಾತು ಅಥವಾ ಶ್ರವಣದಲ್ಲಿ ತೊಂದರೆ ಉಂಟಾದಾಗ ಸಂವಹನದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ ಎಂದರು.

71 ಮಂದಿಗೆ ಪದವಿ:

ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 71 ಮಂದಿಗೆ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಪೈಕಿ 41 ಮಂದಿ ಪದವೀಧರರು ಹಾಗೂ 30 ಮಂದಿ ಸ್ನಾತಕೋತ್ತರ ಪದವೀಧರರು ಪ್ರಮಾಣ ಪತ್ರ ಪಡೆದರು. 9 ಮಂದಿ ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ ವಿವಿಧ ಬಹುಮಾನ ಪಡೆದರು.

ಜೆಎಸ್‌ಎಸ್‌ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌. ನಾಗರಾಜ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್‌. ಮಹೇಶ್‌, ಪ್ರಾಂಶುಪಾಲೆ ಸುಮಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಲೋಕಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ
ದೇಶದಲ್ಲೇ ಮೊದಲ ಬಾರಿ 138 ರೈತರಿಗೆ ಪ್ರಮಾಣಪತ್ರ