ದೇವಸ್ಥಾನದಲ್ಲಿ ಮಾರ್ದನಿಸಿದ ಶಿವನಾಮ ಸ್ಮರಣೆ

KannadaprabhaNewsNetwork |  
Published : Feb 27, 2025, 12:35 AM IST
26ಕೆಪಿಎಲ್2:ಕೊಪ್ಪಳ ನಗರದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಅಪಾರ ಭಕ್ತ ಸಮೂಹ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. | Kannada Prabha

ಸಾರಾಂಶ

ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳನ್ನು ಹೂಗಳಿಂದ ಅಲಂಕರಿಸಿದ್ದು ಬೆಳಗ್ಗೆಯಿಂದ ವಿಶೇಷ ಪೂಜೆ ಜರುಗಿದವು. ಶಿವ ದೇವಸ್ಥಾನದಲ್ಲಿ ಶಿವಲಿಂಗ, ಶಿವಮೂರ್ತಿ ಹಾಗೂ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು.

ಕೊಪ್ಪಳ:

ಶಿವರಾತ್ರಿ ಪ್ರಯುಕ್ತ ಜಿಲ್ಲಾದ್ಯಂತ ಈಶ್ವರ ದೇವಸ್ಥಾನಗಳಲ್ಲಿ ಭಕ್ತರು ಬುಧವಾರ ಶಿವನಾಮ ಸ್ಮರಣೆ ಮಾಡಿದರು. ಪ್ರಮುಖ ದೇವಸ್ಥಾನಗಳಲ್ಲಿ ಜಾಗರಣೆ ಮಾಡುವ ಮೂಲಕ ಓ ನಮಃ ಶಿವಾಯ ಎಂದು ರಾತ್ರಿಯಿಡಿ ಜಪಿಸಿ ಭಕ್ತಿ ಮೆರೆದರು. ಕೆಲವೆಡೆ ರಥೋತ್ಸವ ಸಹ ಜರುಗಿದವು.

ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳನ್ನು ಹೂಗಳಿಂದ ಅಲಂಕರಿಸಿದ್ದು ಬೆಳಗ್ಗೆಯಿಂದ ವಿಶೇಷ ಪೂಜೆ ಜರುಗಿದವು. ಶಿವ ದೇವಸ್ಥಾನದಲ್ಲಿ ಶಿವಲಿಂಗ, ಶಿವಮೂರ್ತಿ ಹಾಗೂ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಭಕ್ತರು ಇಡೀ ದಿನ ನೀರು, ಉಪಾಹಾರ ಸೇವಿಸದೆ ಸಂಜೆವರೆಗೂ ಉಪವಾಸವಿದ್ದು ಸಂಜೆ ಶಿವದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಂಜೆ ಆಗುತ್ತಿದ್ದಂತೆ ದೇವಸ್ಥಾನಕ್ಕೆ ತೆರಳಿ ಶಿವಲಿಂಗಕ್ಕೆ ನೈವೇದ್ಯ, ಹಣ್ಣು, ಅಳ್ಳಿಟ್ಟು ಉಂಡೆ ನೈವೇದ್ಯೆ ಸಮರ್ಪಿಸಿ ಭಕ್ತಿ ಸಮರ್ಪಿಸಿದರು. ಕೆಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು. ಮಿರ್ಚಿ, ಒಗ್ಗರಣೆ, ಹಾಲು, ಹಣ್ಣುಗಳನ್ನು ಭಕ್ತರಿಗೆ ವಿತರಿಸಲಾಯಿತು. ಜಿಲ್ಲಾದ್ಯಂತ ಶಿವನ ದೇವಸ್ಥಾನಗಳಲ್ಲಿ ರಾತ್ರಿಯಿಡಿ ಪೂಜಾ ಕೈಕಂರ್ಯಗಳು ನಡೆದವು. ಭಜನೆ ಮಾಡುವ ಮೂಲಕ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.

ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ:

ಕೊಪ್ಪಳ ನಗರದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜಾನಪದ ಕಲಾವಿದ ಡಾ. ಜೀವನಸಾಬ್ ಬಿನ್ನಾಳ ಅವರು ಜಾನಪದ ಗೀತೆ ಪ್ರಸ್ತುತಪಡಿಸಿದರು. ಅಲ್ಲದೆ ಜಾನಪದ ಶೈಲಿಯ ಹಾಸ್ಯದ ಮೂಲಕ ನೆರದಿದ್ದ ಭಕ್ತರನ್ನು ಹಾಸ್ಯಗಡಲಲ್ಲಿ ತೆಲಿಸಿದರು. ಭಕ್ತಿ ಜತೆಗೆ ಸಂಗೀತ ಭಕ್ತರನ್ನು ತಲೆದೂಗುವಂತೆ ಮಾಡಿತು. ಬೆಳಗ್ಗೆ ದೇವಸ್ಥಾನದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಿಗೆ ಪೂಜೆ, ಅಭಿಷೇಕ ಸಲ್ಲಿಸಲಾಗಿತ್ತು. ಸಂಜೆ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರು ದೇವಿಗೆ ನೈವೇದ್ಯ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಸಾಲು ಗಟ್ಟಿ ನಿಂತು ದೇವಿಯ ದರ್ಶನ ಪಡೆದರು.

ವೈವಿಧ್ಯಮಯ ಶಿವಲಿಂಗು ದರ್ಶನ:

ನಗರದ ಈಶ್ವರ ಪಾರ್ಕಿನಲ್ಲಿ ಶಿವರಾತ್ರಿ ಪ್ರಯುಕ್ತ ವೈವಿಧ್ಯಮ ಶಿವಲಿಂಗುಗಳನ್ನು ನಿರ್ಮಿಸಲಾಗಿತ್ತು. ಭಕ್ತರು ಆಗಮಿಸಿ ಶಿವಲಿಂಗು ದರ್ಶನ ಪಡೆದು ಪುನೀತರಾದರು. ಕೇದಾರನಾಥ ದೇವಸ್ಥಾನ ಎಂದು ಪ್ರಸಿದ್ಧಿಯಾದ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. ಶ್ರೀಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಸೇರಿದ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಮಿಟಿಯ ಸದಸ್ಯರು ಭಕ್ತರಿಗೆ ಮಂಡಾಳು ವಗ್ಗರಣೆ, ಮಿರ್ಚಿ ಉಪಾಹಾರ ವ್ಯವಸ್ಥೆ ಮಾಡಿದ್ದರು.ಗಳೇವು ಹೂಡಿ ರೈತ ವರ್ಗದಿಂದ ಪೂಜೆ

ಶಿವರಾತ್ರಿ ಹಬ್ಬದ ದಿನ ರೈತ ವರ್ಗ ಗಳೇವು ಹೂಡಿ ಎತ್ತು, ಕುಂಟೆ, ಭೂ ತಾಯಿಗೆ ಪೂಜೆ ಸಲ್ಲಿಸಿದರು. ಈ ವರ್ಷ ಉಳುಮೆ ಮಾಡಲು ಶಿವರಾತ್ರಿ ದಿನ ಪ್ರಥಮ ಎಂಬಂತೆ ರೈತ ವರ್ಗ ಕುಂಟೆಗಳನ್ನು ಪೂಜಿಸಿ ಜಮೀನುಗಳನ್ನು ಹರಗಿದರು. ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಭೂಮಿ ಉಳುಮೆಗೆ ಶಿವರಾತ್ರಿ ದಿನ ಪೂಜೆ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ