ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯಲ್ಲಿ ಕಾರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಯುವಕರ ಮೇಲೆ ನಡೆದ ಈ ಅಮಾನವೀಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಅವರ ಬಟ್ಟೆ ಕಳಚಿ ಶಾಕ್ ನೀಡುವಂತಹ ತಾಲಿಬಾನ್ ಕೃತ್ಯ ನಡೆಸಿರುವುದು ನಿಜಕ್ಕೂ ದುಃಖ. ಇದಕ್ಕೆ ಕೂಡಲೇ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವುದಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಘಟನೆಯ ಆರೋಪಿಗಳು ಪ್ರಿಯಾಂಕ್ ಖರ್ಗೆ ಮತ್ತು ಲೋಕಸಭಾ ಸ್ಪರ್ಧೆಗೆ ನಿಂತ ರಾಧಾಕೃಷ್ಣ ದೊಡ್ಡಮನಿಯವರ ನಿಕಟವರ್ತಿಗಳಾಗಿದ್ದು, ನಿತ್ಯ ಅವರ ಒಡನಾಟದಲ್ಲಿರುವವರು. ಆದುದರಿಂದ ಆರೋಪಿಗಳು ಯಾವುದೇ ಭಯವಿಲ್ಲದೆ ಇಂಥ ನೀಚ ಕೃತ್ಯವನ್ನು ಮಾಡಿ ಕಲಬುರ್ಗಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ನೂರಾರು ಕೃತ್ಯಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಈ ಘಟನೆ ಮೇ ನಾಲ್ಕರಂದು ಸಂಭವಿಸಿದ್ದರೂ ಮಾಧ್ಯಮಗಳಿಗೆ ತಿಳಿಸದೆ ರಹಸ್ಯವಾಗಿ ಇಟ್ಟಿರುವುದರಿಂದ ಪೊಲೀಸರ ನಿಷ್ಕ್ರೀಯತೆ ಹಾಗು ಕೈವಾಡವು ಇದೆ ಎಂದು ಆರೋಪಿಸಿದ ಅವರು, ನಗರದಲ್ಲಿ ನಿರ್ಭೀತಿಯಿಂದ ಜೀವನ ಮಾಡಲು ಕಷ್ಟಕರವಾಗಿದ್ದು ಪೊಲೀಸರು ಕಾಂಗ್ರೆಸ್ಸಿನ ಕೈ ಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರ ನೆಮ್ಮದಿಯ ಹಾಗೂ ನಿರ್ಭೀತೀಯ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿದೆ. ಕಳೆದ ಕೆಲವಾರು ತಿಂಗಳಿಂದ ಸಚಿವರ ಕುಮ್ಮಕ್ಕು ಹಾಗೂ ಸರ್ಕಾರದ ಪ್ರೋತ್ಸಾಹದಿಂದ ದುಷ್ಟ ಶಕ್ತಿಗಳು ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುತ್ತಿವೆ. ಯಾವುದೇ ರೀತಿಯ ಭಯ ಇಲ್ಲದೆ ಕಾನೂನನ್ನು ಕೈಗೆತ್ತಿಕೊಂಡು ಅಮಾಯಕರ ಮೇಲೆ ದೌರ್ಜನ್ಯಗಳಾಗುತ್ತಿರುವುದನ್ನು ನೋಡಿಯು ನೋಡದಂತಿರುವ ಉಸ್ತುವಾರಿ ಸಚಿವರ ನಡವಳಿಕೆಯನ್ನು ತೀವ್ರ ಖಂಡನೀಯ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.