ಕನ್ನಡಪ್ರಭ ವಾರ್ತೆ ಪುತ್ತೂರು
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿರುವ ಪುತ್ತೂರಿನ ಖಾಸಗಿ ಶಾಲೆಯೊಂದರ ಬಳಿ ಬುಧವಾರ ಚಲನಚಿತ್ರವೊಂದಕ್ಕೆ ಸಂಬಂಧಿಸಿದ ವೆಡ್ಡಿಂಗ್ ಶೂಟಿಂಗ್ ಪ್ರಯತ್ನವನ್ನು ತಡೆಯಲಾಗಿದೆ.ಮಕ್ಕಳನ್ನು ಪರೀಕ್ಷೆಗೆಂದು ಕರೆದುಕೊಂಡ ಬರುತ್ತಿದ್ದ ಪೋಷಕರಿಗೆ ಈ ಬಗ್ಗೆ ಗೊಂದಲ ಉಂಟಾಗಿ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲಾ ಮುಖ್ಯಗುರುಗಳು ಸೇರಿಕೊಂಡು ಚಿತ್ರೀಕರಣ ನಡೆಸುತ್ತಿದ್ದ ತಂಡವನ್ನು ಮರಳಿ ಕಳುಹಿಸಿದ್ದಾರೆ.ಇಲ್ಲಿನ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆ ನಡೆಯುತ್ತಿದೆ. ಬುಧವಾರ ಬೆಳಗ್ಗೆ ಇಲ್ಲಿಗೆ ಪರೀಕ್ಷೆಗಾಗಿ ಆಗಮಿಸಿದ ಮಕ್ಕಳಿಗೆ ಮುಂಭಾಗದ ಗೇಟು ತೆರೆಯಲು ನಿರಾಕರಿಸಲಾಗಿತ್ತು. ವಿಚಾರಿಸಿದಾಗ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹಿಂದಿನ ಗೇಟ್‌ನಿಂದ ಬನ್ನಿ ಎಂಬ ಮಾಹಿತಿ ನೀಡಲಾಗಿತ್ತು. ಇದರಿಂದ ಕುಪಿತರಾದ ಪೋಷಕರು ಈ ಬಗ್ಗೆ ಪೊಲೀಸರಿಗೆ ಮತ್ತು ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದರು. ಈ ನಡುವೆ ಶಾಲಾ ಮುಖ್ಯಗುರುಗಳು ಶೂಟಿಂಗ್ ನಡೆಸುತ್ತಿದ್ದ ತಂಡದೊಂದಿಗೆ ಮಾತುಕತೆ ನಡೆಸಿ ಶೂಟಿಂಗ್ ಸ್ಥಗಿತಗೊಳಿಸವಂತೆ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್ ಶೂಟಿಂಗ್ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ಆರ್ಯನ್ ನಟನೆಯ ‘ಲವ್ ಟು ಲಸ್ಸಿ’ ಕನ್ನಡ ಸಿನಿಮಾದ ಶೂಟಿಂಗ್ ಇದಾಗಿದ್ದು, ಇಲ್ಲಿನ ಚರ್ಚ್ ಅಕ್ಕಪಕ್ಕದಲ್ಲಿಯೇ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿವೆ. ಇದೀಗ ಪ್ರೌಢಶಾಲೆಯು ಪರೀಕ್ಷಾ ಕೇಂದ್ರವಾಗಿದ್ದು, ಇಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಸಿನಿಮಾ ಶೂಟಿಂಗ್‌ಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಯ ಸಂಚಾಲಕರಿಂದ ಅನುಮತಿ ಪಡೆಯಲಾಗಿತ್ತು. ಆದರೆ ಇಂದು ನಡೆಯುತ್ತಿರುವ ಶೂಟಿಂಗ್ ಬಗ್ಗೆ ಶಾಲೆಗಾಗಲೀ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದ್ದು, ಶಾಲೆಯ ಪರೀಕ್ಷೆಗೆ ತೊಂದರೆಯಾಗದಂತೆ ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಲಾಯಿತು.ಚಿತ್ರೀಕರಣ ನಡೆಸುವ ಬಗ್ಗೆ ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಗಮನಕ್ಕೆ ಬಂದ ತಕ್ಷಣವೇ ಅವರೊಂದಿಗೆ ಮಾತನಾಡಿ ಸ್ಥಗಿತಗೊಳಿಸಲಾಗಿದೆ. ಪರೀಕ್ಷೆ ಆರಂಭಕ್ಕೆ ಮುನ್ನವೇ ಅವರನ್ನು ಹೊರಗೆ ಕಳುಹಿಸಿ ಗೇಟ್‌ಗೆ ಬೀಗ ಹಾಕಲಾಗಿದೆ ಎಂದು ಶಾಲಾ ಮುಖ್ಯಗುರು ರೋಸ್ಲಿನ್ ತಿಳಿಸಿದ್ದಾರೆ.