ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು

KannadaprabhaNewsNetwork |  
Published : Sep 14, 2026, 02:15 AM IST
ನಗರದಲ್ಲಿ ಗಣೇಶ ಖರೀದಿಯಲ್ಲಿ ಮುಗಿಬಿದ್ದಿರುವ ಸಾರ್ವಜನಿಕರು | Kannada Prabha

ಸಾರಾಂಶ

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನಸೊಪ್ಪು ಮಾರಾಟ ಭರ್ಜರಿಯಾಗಿದ್ದು ಈ ಬಾರಿ ಎಲ್ಲವೂ ದುಬಾರಿಯಾಗಿವೆ. ಹಬ್ಬದ ವಾತಾವರಣ ಎಲ್ಲೆಡೆ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನಸೊಪ್ಪು ಮಾರಾಟ ಭರ್ಜರಿಯಾಗಿದ್ದು ಈ ಬಾರಿ ಎಲ್ಲವೂ ದುಬಾರಿಯಾಗಿವೆ. ಹಬ್ಬದ ವಾತಾವರಣ ಎಲ್ಲೆಡೆ ಕಂಡು ಬಂದಿದೆ.

ಮಳೆಯ ಕೊರತೆಯಿಂದ ಇಳುವರಿ ಕಡಿಮೆಯಾಗಿ ಹೂವಿನ ದರದಲ್ಲಿ ಏರಿಕೆಯಾಗಿದೆ. ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಚೆಂಡುಹೂವು, ಸೇರಿದಂತೆ ಮತ್ತಿತರ ಹೂವುಗಳ ದರವೂ ಕೊಂಚ ಹೆಚ್ಚಳವಾಗಿವೆ. ಬಾಳೆಹಣ್ಣು, ಮೊಸಂಬಿ, ಸೇಬು, ಪೇರಲೆ, ಸೀತಾಫಲ ಸೇರಿದಂತೆ ಇತರೆ ಹಣ್ಣುಗಳ ದರವೂ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿಬಿದ್ದಿದೆ. ಈ ನಡುವೆಯೂ ಗ್ರಾಹಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಉತ್ಸಾಹದಿಂದಲೇ ಖರೀದಿಸಿದರು.

ನಗರದ ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳು ಹಬ್ಬದ ಖರೀದಿ ಕಾರಣಕ್ಕೆ ಗ್ರಾಹಕರಿಂದ ತುಂಬಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳಲ್ಲಿ ಹೂವು, ಹಣ್ಣುಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಕನಕಾಂಬರ ಪ್ರತಿ ಕೆ.ಜಿ.ಗೆ 1000-1200 ರು., ಮಲ್ಲಿಗೆ 500-600 ರು., ಗುಲಾಬಿ 200-250 ರು. ಚೆಂಡು ಹೂವು 80-100 ರು., ಸುಗಂಧರಾಜ 250-300 ರು. ಸೇವಂತಿಗೆ 150-200 ರು. ದರವಿತ್ತು. ಸೇಬು ಕೆ.ಜಿಗೆ 150-250 ರು., ದಾಳಿಂಬೆ 120-250 ರು.,ಸಪೋಟ 150-200 ರು., ಮೂಸಂಬಿ ಹಾಗೂ ಕಿತ್ತಳೆ 60-80 ರು., ದ್ರಾಕ್ಷಿ 120-150 ರು. ದರದಲ್ಲಿ ಮಾರಾಟವಾಗುತ್ತಿದೆ.

ವಿಭಿನ್ನ ಗಣೇಶಮೂರ್ತಿಗಳ ಆಕರ್ಷಣೆ:

ಬೆಂಗಳೂರಿನ ಪಾಟರಿ ಟೌನ್, ಮಾವಳ್ಳಿ, ಶೇಷಾದ್ರಿಪುರಂ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಮತ್ತು ಗಾಂಧಿ ಬಜಾರ್‌ಗಳ ತಾತ್ಕಾಲಿಕ ಮಳಿಗೆಗಳಲ್ಲಿ ಸಾವಿರಾರು ಮೂರ್ತಿಗಳು ಮಾರಾಟವಾಗುತ್ತಿವೆ. ಹಬ್ಬದ ಸಂಭ್ರಮದ ನಡುವೆ, ವಿಶೇಷವಾಗಿ ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಣ್ಣ ಗಾತ್ರದ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಆರ್‌.ವಿ. ರಸ್ತೆಯಲ್ಲಿ ಕಾಂತಾರ ಗಣಪ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಗಣಪ, ಮಲೈ ಮಹದೇಶ್ವರ ಗಣಪ, ತಮಿಳುನಾಡಿನ ಪಿಳ್ಳ್ಯಾರಪಟ್ಟಿ ಪೇಪರ್‌ ಗಣಪ ಹೀಗೆ ವಿಶೇಷ ಗಣಪನ ಮೂರ್ತಿಗಳು ವಿನಾಯಕ ಆ್ಯಂಡ್‌ ಕೋ ಸಂಸ್ಥೆಯ ಮಾಲೀಕ ಎನ್‌.ಶ್ರೀನಿವಾಸ್‌ ಅವರ ಮಳಿಗೆಯಲ್ಲಿ ಗಮನ ಸೆಳೆದವು. ಪ್ರತಿ ಬಾರಿಯೂ ಗೌರಿಯನ್ನು ಪುಟಾಣಿ ಗಾತ್ರದಲ್ಲಿ ನಿರ್ಮಿಸುತ್ತಿದ್ದರು. ಆದರೆ ಈ ಬಾರಿ ಗಣೇಶನಂತೆ ಗೌರಿಯೂ ಎತ್ತರದ ಮೂರ್ತಿಯಾಗಿ, ಮೆಹಂದಿ ಹಚ್ಚಿದ ಕೈಗಳೊಂದಿಗೆ, ಆನೆಯ ಮೇಲೆ ಕುಳಿತು ಬೀಗುವಂತೆ ಮಾಡಲಾಗಿದೆ.

ಚಿಕ್ಕ ಮೂರ್ತಿಗಳಿಗೆ ಬೇಡಿಕೆ:

ಬಸವನಗುಡಿ, ಮಲ್ಲೇಶ್ವರಂ ಹಾಗೂ ಯಶವಂತಪುರ ಮಾರುಕಟ್ಟೆಗಳಿಗೆ ಆಕರ್ಷಕ ಮೂರ್ತಿಗಳು ಗಮನ ಸೆಳೆಯುತ್ತಿದ್ದು ಗ್ರಾಹಕರು ಖುಷಿಯಿಂದಲೇ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಗಳಲ್ಲಿ ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಬಾಲ ಗಣೇಶ, ಈಶ್ವರ ಗಣೇಶ, ಮಹಾರಾಜ ಗಣೇಶ ಹಾಗೂ ನವಿಲಿನ ಮೇಲೆ ಕುಳಿತಿರುವ ಭಿನ್ನ ವಿಷಯಾಧಾರಿತ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿತ್ತು. ಶಾಲೆಗಳು, ಕಾಲೇಜುಗಳು ಮತ್ತು ಅಪಾರ್ಟ್‌ಮೆಂಟ್ ಸಂಘಗಳು, ಖಾಸಗಿ ಮತ್ತು ಸರ್ಕಾರ ಕಚೇರಿಗಳಲ್ಲಿ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದು, ಮೂರ್ತಿಗಳ ಬೆಲೆ 500 ರಿಂದ 5 ಸಾವಿರ ರು. ಇದೆ. ಅಲ್ಲದೇ ಗಣೇಶಮೂರ್ತಿಯ ಗಾತ್ರ, ಎತ್ತರಕ್ಕೆ ತಕ್ಕಂತೆ 10ರಿಂದ 25 ಸಾವಿರ ರು.ಗಳವರೆಗೂ ಬೆಲೆಗಳನ್ನು ನಿಗದಿಪಡಿಸಲಾಗಿತ್ತು.

ಬಾಗಿನ ಸಾಮಗ್ರಿಗಳಿಗೆ ಬೇಡಿಕೆ

ಗೌರಿ ಪೂಜೆಗೆ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿನ ತದಿಗೆ ಮುಖ್ಯವಾಗುತ್ತದೆ. ಸೋಮವಾರ ಸೂರ್ಯೋದಯದ ಆರಂಭದಲ್ಲಿ ತದಿಗೆ ಇರುವುದರಿಂದ ಗೌರಿ ಪೂಜೆಗೆ ಸೂಕ್ತ ಸಮಯವಾಗಿದೆ. ಹೀಗಾಗಿ ಶ್ರೀ ಸ್ವರ್ಣಗೌರಿ ವ್ರತ ಮತ್ತು ಚೌತಿಯನ್ನು ಒಂದೇ ದಿನ ಆಚರಿಸಲಾಗುತ್ತದೆ. ಹಾಗಾಗಿ ಸಾಂಪ್ರದಾಯಿಕ ಗೌರಿ ಬಾಗಿನದ ಸಾಮಗ್ರಿಗಳಿಗೂ ಬೇಡಿಕೆ ಇದೆ. ಧಾನ್ಯಗಳು, ಅರಿಶಿನ, ಕುಂಕುಮ, ಬಳೆಗಳು ಮತ್ತು ಇತರ ಸಾಂಪ್ರದಾಯಿಕ ವಸ್ತುಗಳನ್ನು ಒಳಗೊಂಡ ಸಿದ್ಧ ಕಿಟ್‌ಗಳ ಬೆಲೆ 400 - 600 ರು.ಇತ್ತು.

5 ಸಾವಿರ ಗೌರಿ ಗಣೇಶ ಮೂರ್ತಿಗಳ ಉಚಿತ ವಿತರಣೆ

ಪರಿಸರ ಸಂರಕ್ಷ ಣೆ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಜಯನಗರ ಸ್ಪೋರ್ಟ್ಸ್ ಅಂಡ್‌ ಕಲ್ಚರಲ್‌ ಅಸೋಸಿಯೇಷನ್‌ ಹಾಗೂ ಜಯ, ಜಯ ಸಾಯಿ ಎಂಟರ್‌ ಪ್ರೈಸಸ್‌ ವತಿಯಿಂದ ವಿಜಯನಗರದಲ್ಲಿ ಭಾನುವಾರ 5 ಸಾವಿರ ಪರಿಸರ ಸ್ನೇಹಿ ಮಣ್ಣಿನ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಎಚ್‌. ರವೀಂದ್ರ, ಶೈಲಜಾ ಸೋಮಣ್ಣ, ಬಿ.ವಿ. ಸುರೇಶ್‌, ಅರ್ಚನಾ ಸುರೇಶ್‌ ಸೇರಿದಂತೆ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧವೇಕೆ
ಗಜಮುಖನ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು!