ಮುಂಡರಗಿಯಲ್ಲಿ ಮೂತ್ರಾಲಯಗಳ ಕೊರತೆ

KannadaprabhaNewsNetwork |  
Published : Jul 10, 2026, 01:00 AM IST
9ಎಂಡಿಜಿ1. ಮುಂಡರಗಿ ಪಟ್ಟಣದ ಪುರಸಭೆ ಪಕ್ಕದ ಉದ್ಯಾನವನದ ಹತ್ತಿರವಿರುವ ಮೂತ್ರಾಲಯದ ಚಿತ್ರ. | Kannada Prabha

ಸಾರಾಂಶ

ಪಟ್ಟಣದ ಪುರಸಭೆ ಉದ್ಯಾನ ಪಕ್ಕ, ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಬದಿ, ಅನ್ನದಾನೀಶ್ವರ ಕಾಲೇಜು ಸಮೀಪದ ರಾಮೇನಹಳ್ಳಿ ರಸ್ತೆಯಲ್ಲಿ ಹೀಗೆ ಇಡೀ ಪಟ್ಟಣದಲ್ಲಿ ಕೇವಲ ಮೂರು ಮೂತ್ರಾಲಯಗಳಿವೆ. ಅವೆಲ್ಲವೂ ಸ್ವಚ್ಛತೆ ಕೊರತೆಯಿಂದ ಗಬ್ಬೆದ್ದು ನಾರುತ್ತಿವೆ.

ಶರಣು ಸೊಲಗಿಮುಂಡರಗಿ: ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಪಟ್ಟಣದಲ್ಲಿ ಕೇವಲ ಮೂರೇ ಸಾರ್ವಜನಿಕ ಮೂತ್ರಾಲಯಗಳಿದ್ದು, ನಿತ್ಯ ವ್ಯಾಪಾರ ವಹಿವಾಟಿಗೆಂದು ಬರುವವರು ಪರದಾಡುತ್ತಿದ್ದು, ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಪುರಸಭೆ ಉದ್ಯಾನ ಪಕ್ಕ, ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಬದಿ, ಅನ್ನದಾನೀಶ್ವರ ಕಾಲೇಜು ಸಮೀಪದ ರಾಮೇನಹಳ್ಳಿ ರಸ್ತೆಯಲ್ಲಿ ಹೀಗೆ ಇಡೀ ಪಟ್ಟಣದಲ್ಲಿ ಕೇವಲ ಮೂರು ಮೂತ್ರಾಲಯಗಳಿವೆ. ಅವೆಲ್ಲವೂ ಸ್ವಚ್ಛತೆ ಕೊರತೆಯಿಂದ ಗಬ್ಬೆದ್ದು ನಾರುತ್ತಿವೆ.ಎಲ್ಲೆಲ್ಲಿ ಆಗಬೇಕು?: ಪಟ್ಟಣದ ಬಸ್ ನಿಲ್ದಾಣದ ಹತ್ತಿರ, ಬಜಾರ, ತರಕಾರಿ ಮಾರುಕಟ್ಟೆ, ಕೋಟೆಭಾಗ, ಜಾಗೃತ ವೃತ್ತ, ಕೊಪ್ಪಳ ವೃತ್ತ, ಹಳೆಯ ಎಪಿಎಂಸಿ ಹತ್ತಿರ, ಪೊಲೀಸ್ ಠಾಣೆ ಹತ್ತಿರ, ಸರ್ಕಾರಿ ಆಸ್ಪತ್ರೆ ಹತ್ತಿರ, ಹೊಸ ಎಪಿಎಂಸಿ ಹತ್ತಿರ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನದಟ್ಟಣೆ ಇರುವ ಸರ್ಕಾರಿ ಕಚೇರಿಗಳ ಸಮೀಪ ಸಾರ್ವಜನಿಕ ಮೂತ್ರಾಲಯಗಳ ಅವಶ್ಯವಿದೆ. ಮಹಿಳೆಯ ಪರದಾಟ: ಪಟ್ಟಣದಲ್ಲಿ ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳಾ ಮೂತ್ರಾಲಯಗಳ ಕೊರತೆಯೂ ಇದೆ. ನಿತ್ಯ ಆಸ್ಪತ್ರೆ, ಸರ್ಕಾರಿ ಕಚೇರಿಗಳ ಕೆಲಸಕ್ಕೆಂದು ಬರುವ ಮಹಿಳೆಯರ ಪಾಡಂತೂ ಹೇಳತೀರದಾಗಿದೆ. ಪುರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ವಚ್ಛತೆ ಮರೀಚಿಕೆ: ಪುರಸಭೆ ಉದ್ಯಾನವನ ಬಳಿ ಇರುವ ಮೂತ್ರಾಲಯ ಸ್ವಚ್ಛತೆ ಇಲ್ಲದೇ ಗಬ್ಬು ವಾಸನೆ ಬೀರುತ್ತಿದೆ. ಇದರಲ್ಲಿ ಮದ್ಯದ ಪೌಚ್‌ಗಳು ಹಾಗೂ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಕಸ ಬಿದ್ದು ಮೂತ್ರ ಹರಿದುಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಿತ್ಯ ಸ್ವಚ್ಛತೆಗೆ ಪುರಸಭೆ ಮುಂದಾಗಬೇಕು.

ಕಾಲೇಜು ಸಮೀಪದ ರಾಮೇನಹಳ್ಳಿ ರಸ್ತೆಯಲ್ಲಿರುವ ಮೂತ್ರಾಲಯಕ್ಕೆ ಮೂಗು ಮುಚ್ಚಿಕೊಂಡೇ ಬರಬೇಕು. ಒಳಗೆ ಕಾಲಿಡಲು ಆಗದಷ್ಟು ಮೂತ್ರ ಅದರ ಆವರಣದಲ್ಲಿಯೇ ನಿಂತು ಗಬ್ಬುವಾಸನೆ ಬೀರುತ್ತಿದೆ. ಈ ಕುರಿತು ಪುರಸಭೆ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.

ಮಹಿಳೆಯರಿಗೆ ತೊಂದರೆ: ಪಟ್ಟಣದಲ್ಲಿ ಮೂತ್ರಾಲಯ ಕೊರತೆಯಿಂದಾಗಿ ನಿತ್ಯವೂ ಸಾರ್ವಜನಿಕರು ಪರದಾಡುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಪುರಸಭೆ ತನ್ನ ಜಾಗದ ವ್ಯಾಪ್ತಿಯನ್ನು ಗುರುತಿಸಿ ಅವಶ್ಯವಿರುವ ಎಲ್ಲ ಸ್ಥಳಗಳಲ್ಲಿ ತಕ್ಷಣವೇ ಮೂತ್ರಾಲಯ ನಿರ್ಮಿಸಬೇಕು ಎಂದು ವಿಶ್ವಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಕೆ. ತ‍ಳಗಡೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರ ಹೆಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು!
ನಾಳೆ ಬೆಂಗಳೂರಿನಲ್ಲಿ ಸಿಎಂ, ಡಿಸಿಎಂಗೆ ಸನ್ಮಾನ ಕಾರ್ಯಕ್ರಮ