ಸಾಧನೆಗಾಗಿ ಮಕ್ಕಳಿಗೆ ಸೋಲಿನ ರುಚಿ ತೋರಿಸಿ: ಹಾರಿಕ ಮಂಜುನಾಥ

KannadaprabhaNewsNetwork | Published : Jan 5, 2025 1:30 AM

ಸಾರಾಂಶ

ಎಲ್ಲಿವರೆಗೆ ಹೆತ್ತವರು ತಮ್ಮ ಮಕ್ಕಳಿಗೆ ಸೋಲಿನ ರುಚಿ ತೋರಿಸುವುದಿಲ್ಲವೋ ಅಲ್ಲಿವರೆಗೂ ಮಕ್ಕಳು ತಾವೇ ಸರಿ ಎಂಬಂತೆ ಬೆಳೆಯುತ್ತಾರೆಂಬ ಅರಿವು ಪಾಲಕರಿಗೆ ಇರಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಹಾರಿಕ ಮಂಜುನಾಥ ತಿಳಿಸಿದರು. ದಾವಣಗೆರೆಯಲ್ಲಿ ಸೋಮೇಶ್ವರೋತ್ಸವ-2025ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಕೆ.ರಾಘವೇಂದ್ರ ನಾಯರಿಗೆ ಅವರಿಗೆ ಸೋಮೇಶ್ವರಿ ಸಿರಿ ಪ್ರಶಸ್ತಿ ಪ್ರದಾನ । ಸೋಮೇಶ್ವರೋತ್ಸವ-2025

ಕನ್ನಡಪ್ರಭ ವಾರ್ತೆ ದಾವಣಗೆರೆ

ಎಲ್ಲಿವರೆಗೆ ಹೆತ್ತವರು ತಮ್ಮ ಮಕ್ಕಳಿಗೆ ಸೋಲಿನ ರುಚಿ ತೋರಿಸುವುದಿಲ್ಲವೋ ಅಲ್ಲಿವರೆಗೂ ಮಕ್ಕಳು ತಾವೇ ಸರಿ ಎಂಬಂತೆ ಬೆಳೆಯುತ್ತಾರೆಂಬ ಅರಿವು ಪಾಲಕರಿಗೆ ಇರಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಹಾರಿಕ ಮಂಜುನಾಥ ತಿಳಿಸಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸೋಮೇಶ್ವರೋತ್ಸವ-2025ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಕ್ಕಳನ್ನು ಸತ್ರ್ರಜೆಗಳನ್ನಾಗಿ ರೂಪಿಸುವಲ್ಲಿ ಕುಟುಂಬದ ಪಾತ್ರ ವಿಷಯವಾಗಿ ಮಾತನಾಡಿದ ಅವರು, ಮಕ್ಕಳಿಗೆ ಸೋಲಿನ ರುಚಿ ತೋರಿಸಿದಾಗ ಮಾತ್ರ ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರ ಬಂದು, ಮಕ್ಕಳು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಲು ಶುರು ಮಾಡುತ್ತಾರೆ ಎಂದರು.

ಈಗಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸ್ವಾಮಿ ವಿವೇಕಾನಂದರಂತಹ ಚಾರಿತ್ರ್ಯದ ಶಿಕ್ಷಣ ನೀಡಬೇಕು. ಪಠ್ಯ ಪುಸ್ತಕಗಳು ಮಕ್ಕಳನ್ನು ಶಿಕ್ಷಣವಂತರಾಗಿ ಮಾತ್ರ ಮಾಡುತ್ತವೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಧಾರೆ ಎರೆಯಬೇಕು. ಎಲ್ಲಿವರೆಗೂ ತಂದೆ, ತಾಯಿಯರು ಮಕ್ಕಳಿಗೆ ಸರಿ, ತಪ್ಪುಗಳನ್ನು ತಿಳಿಸಿ ಹೇಳುವುದಿಲ್ಲವೋ ಅಲ್ಲಿವರೆಗೂ ಮಕ್ಕಳು ಸಹ ತಾವು ಮಾಡಿದ್ದೇ ಸರಿ ಎಂಬಂತೆ ಬೆಳೆಯುತ್ತಿರುತ್ತಾರೆ ಎಂದು ಹೇಳಿದರು.

ಮಕ್ಕಳ ಜೊತೆಗೆ ಪಾಲಕರು, ಗುರುಗಳ ಸಂಪರ್ಕ ಇರಬೇಕು. ಆಗ ಮಾತ್ರ ಮಕ್ಕಳು ಸಂಸ್ಕಾರದಿಂದ ಬೆಳೆಯುತ್ತಾರೆ. ದಾವಣಗೆರೆ ಜನರು ಬೆಣ್ಣೆಯನ್ನು ತಿಂದರೂ ಸಹ ಕಬ್ಬಿಣದಂತಹ ಮಕ್ಕಳನ್ನು ಬೆಳೆಸಬೇಕು. ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಯ ಕಾರ್ಯಕ್ರಮವು ಅಂತಹದ್ದೊಂದು ಕಾರ್ಯವನ್ನು ನಿರಂತರ ಮಾಡಿಕೊಂಡು ಬರುತ್ತಿದೆ. ಸಂಸ್ಥೆ, ಶಿಕ್ಷಕರು, ಪಾಲಕರು, ಮಕ್ಕಳೊಡನೆ ಉತ್ತಮ ಬಾಂಧವ್ಯ ಇರುವುದಕ್ಕೆ ಇಷ್ಟೊಂದು ಪಾಲಕರು ಸೇರಿರುವುದೇ ಸಾಕ್ಷಿ ಎಂದು ತಿಳಿಸಿದರು.

ಇದೇ ವೇಳೆ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಅವರಿಗೆ ಸೋಮೇಶ್ವರ ಸಿರಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪುರಸ್ಕಾರ ಮಾಡಲಾಯಿತು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸಂಸ್ಥೆಯ ಅಧ್ಯಕ್ಷ, ಹಿರಿಯ ವಕೀಲ ಅಶೋಕ ರೆಡ್ಡಿ, ಕಾರ್ಯದರ್ಶಿ ಕೆ.ಎಂ.ಸುರೇಶ, ಪಾಲಿಕೆ ಸದಸ್ಯ ಕೆ.ಎಂ.ವೀರೇಶ, ಶಾಲೆಯ ಪ್ರಾಚಾರ್ಯರಾದ ವೀಣಾ, ಪ್ರಭಾವತಿ, ಶಿಕ್ಷಕಿ ಚಂದ್ರಕಲಾ, ಆಡಳಿತ ಮಂಡಳಿ ನಿರ್ದೇಶಕ ಪಿ.ಎನ್.ಪರಮೇಶ್ವರಪ್ಪ ಇದ್ದರು.

Share this article