ಕಾರವಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನಪರ ಕಾರ್ಯಕ್ರಮಗಳ ಪ್ರಯೋಜನಗಳನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡುವ ಪಿಎಂ ಸ್ವನಿಧಿ ಯೋಜನೆಯಲ್ಲಿ ಪ್ರಸ್ತುತ ಗುರುತಿಸಿರುವ ಸಂಖ್ಯೆಗಿಂತಲೂ, ಇನ್ನೂ ಹೆಚ್ಚು ಅರ್ಹ ಫಲಾನುಭವಿಗಳು ಜಿಲ್ಲೆಯಲ್ಲಿದ್ದಾರೆ. ಅವರೆಲ್ಲರಿಗೂ ಈ ಯೋಜನೆಯ ಪ್ರಯೋಜನ ದೊರಕಿಸುವಂತೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವಕರ್ಮ ಯೋಜನೆಯಡಿ ಇದುವರೆಗೆ 16,552 ಅರ್ಜಿಗಳನ್ನು ಸ್ವೀಕರಿಸಿ, 10,000 ಜನರನ್ನು ತರಬೇತಿಗೆ ನೊಂದಾಯಿಸಿ, ಕೇವಲ 2,720 ಮಂದಿಗೆ ಮಾತ್ರ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ತರಬೇತಿ ಕೆಂದ್ರಗಳೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ಕುಶಲಕರ್ಮಿಗಳಿಗೆ ತರಬೇತಿ ನೀಡಬೇಕು. ಅವರಿಗೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಒದಗಿಸಿ ಅವರನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂದರು.ಪಿಎಂ ಸೂರ್ಯ ಘರ್ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 244 ಜನರು ಮಾತ್ರ ನೋಂದಣಿ ಮಾಡಿದ್ದು, ಹೆಸ್ಕಾಂ ವತಿಯಿಂದ ಮನೆ ಮನೆಗಳಿಗೆ ಭೇಟಿ ನೀಡಿ, ಯೋಜನೆಯ ಕುರಿತಂತ ಹೆಚ್ಚಿನ ಜಾಗೃತಿ ಮೂಡಿಸಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೌರ ಮೇಲ್ಚಾವಣಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಮುದ್ರಾ ಯೋಜನೆಯ ಶಿಶು, ಕಿಶೋರ್ ಮತ್ತು ತರುಣ್ ವಿಭಾಗಗಳಲ್ಲಿ ಇದುವರೆಗೆ ಒಟ್ಟು 19,092 ಜನರಿಗೆ ₹312.5 ಕೋಟಿ ಸಾಲ ವಿತರಿಸಿದ್ದು, ಈ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಣ್ಣ ಪುಟ್ಟ ಕಾರಣಗಳಿಗೆ ತಿರಸ್ಕೃತ ಮಾಡದೇ, ಗರಿಷ್ಠ ಸಂಖ್ಯೆಯಲ್ಲಿ ಸಾಲ ವಿತರಿಸಬೇಕು. ಇದರಿಂದ ಜಿಲ್ಲೆಯಲ್ಲಿ ಹೊಸ ಉದ್ಯಮಗಳು ಅರಂಭಗೊಂಡು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಡಿಯುಡಿಸಿ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್ ಇದ್ದರು.