ರಾಜ್ಯ, ನೆರೆ ರಾಜ್ಯಗಳ ಭಕ್ತಾಧಿಗಳು ಭಾಗಿ । ದೀಪೋತ್ಸವದಲ್ಲಿ ಸಾವಿರಾರು ಜನರಿಂದ ಭಕ್ತಿ ಸಮರ್ಪಣೆ ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಹಾಲಕ್ಷ್ಮೀ ದೇವಿಯ ಬ್ರಹ್ಮ ರಥೋತ್ಸವವನ್ನ ಮಧುಗಿರಿ ತಗ್ಗಿಹಳ್ಳಿ ಶ್ರೀ ಮಠದ ತಗ್ಗಿಹಳ್ಳಿ ರಾಮಾನಂದ ಸ್ವಾಮೀಜಿ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು. ಬ್ರಹ್ಮರಥೋತ್ಸವಕ್ಕೂ ಮುನ್ನ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಮಹಾಲಕ್ಷ್ಮಿ ಹೋಮ, ಗ್ರಾಮ ದೇವತೆ ದುರ್ಗಾ ಹೋಮದಲ್ಲಿ ಭಾಗವಹಿಸಿದರು.
ಮಧುಗಿರಿ ತಗ್ಗಿಹಳ್ಳಿ ಶ್ರೀ ಮಠದ ರಾಮಾನಂದ ಸ್ವಾಮೀಜಿ ಮಾತನಾಡಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಸ್ತ ಜನತೆಗೆ ಶ್ರೀ ಮಹಾಲಕ್ಷ್ಮಿ ದೇವಿ ಸಕಲ ಐಶ್ವರ್ಯ, ಅರೋಗ್ಯ ಕೊಟ್ಟು ಕಾಪಾಡಲಿ ಎಂದರು.ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕಾರ್ತಿಕ ಮಾಸದ ಕಡೇ ಶುಕ್ರವಾರ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮುಖದಲ್ಲಿ ಬ್ರಹ್ಮರಥೋತ್ಸವ ನಡೆದಿದೆ. ದೇವಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಬೆಳಿಗ್ಗೆ ಯಿಂದ ರಾತ್ರಿ ೧೦ ಗಂಟೆಯವೆರಗೂ ದೇವಿಯ ದರ್ಶನದೊಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಮಹಾಲಕ್ಷ್ಮೀ ಸನ್ನೀಧಾನದಲ್ಲಿ ವಿವಿಧ ಕಾಮಗಾರಿಗಳ ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ತರಲಾಗುವುದು. ೯ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಏಕಕಾಲದಲ್ಲಿ ೨ ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾನ ನೀಡುವ ದಾಸೋಹ ಭವನ ಲೋಕಾರ್ಪಣೆಗೆ ಸಿದ್ದವಿದ್ದು ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುದು ಎಂದು ತಿಳಿಸಿದರು.