ಮೇ 3ರಂದು ಶ್ರೀ ಸ್ವರ್ಣಾಂಬ ದೇವಿ ರಥೋತ್ಸವ

KannadaprabhaNewsNetwork | Published : Apr 29, 2024 1:35 AM

ಸಾರಾಂಶ

ತಾಲೂಕಿನ ಇತಿಹಾಸ ಪ್ರಸಿದ್ಧ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯವರ ರಥೋತ್ಸವ ಮೇ 3 ರ ಶುಕ್ರವಾರ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು.

29 ರಿಂದ ಮೇ 6 ರ ವರೆಗೆ ಏಳು ದಿನಗಳ ಕಾಲ ಜಾತ್ರಾ ಮಹೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಇತಿಹಾಸ ಪ್ರಸಿದ್ಧ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯವರ ರಥೋತ್ಸವ ಮೇ 3 ರ ಶುಕ್ರವಾರ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು.ಈ ಕುರಿತು ಮಾಹಿತಿ ನೀಡಿದ ಅವರು, ಏಪ್ರಿಲ್ 29 ರಿಂದ ಮೇ 6 ರ ವರೆಗೆ ಏಳು ದಿನಗಳ ಕಾಲ ಜಾತ್ರಾ ಮಹೋತ್ಸವದ ಕಾರ್ಯಗಳು ನಡೆಯಲಿವೆ. ಏಪ್ರಿಲ್ 29 ರಂದು ಶ್ರೀಕ್ಷೇತ್ರ ಶಂಖತೀರ್ಥದಲ್ಲಿ ಮೃತ್ತಿಕಾ ಸಂಗ್ರಹಣ, ಕಂಕಣ ಬಂಧನ, ಮಧುವಣಿಗೆ ಶಾಸ್ತ್ರ ನಡೆಯಲಿದೆ. 30 ರಂದು ಮಂಗಳವಾರ ಧ್ವಜಾರೋಹಣ, ರಥಕಳಶ ಸ್ಥಾಪನೆ ನಡೆಯಲಿದ್ದು ಸಪ್ತಶತಿ ಪಾರಾಯಣ ಆರಂಭವಾಗಲಿದೆ. ಸಂಜೆ ಬಾನಸೇವೆ, ಬೇವಿನುಡುಗೆ ಮತ್ತು ಬಾಯಿಬೀಗ ಸೇವೆ ನೆರವೇರಲಿದೆ. ಮೇ 1 ರಂದು ಸ್ವರ್ಣಾಂಬ ದೇವಿಯವರ ರಜತ ಪಲ್ಲಕ್ಕಿಉತ್ಸವ, ಮಹಾಗಣಪತಿ ಮತ್ತು ನವಗ್ರಹ ಹೋಮ, ಸಂಜೆ ದೀಪಾರಾಧನಾ ಮಹೋತ್ಸವ ನಡೆಯಲಿದೆ. ಮೇ 2 ರಂದು ಶ್ರೀಅಮ್ಮನವರ ಚಿಕ್ಕರಥೋತ್ಸವ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಮೇ 3 ರ ಶುಕ್ರವಾರ ಬೆಳಿಗ್ಗೆ ಗಜಾರೋಹಣೋತ್ಸವ, ಪುರಸ್ಸರ ಕಲ್ಯಾಣೋತ್ಸವದ ನಂತರ ದೇವಿಯವರ ಮಹಾ ಬ್ರಹ್ಮ ರಥೋತ್ಸವ ನಡೆಯಲಿದೆ. ಅಂದು ಸಂಜೆ ಮೈಸೂರಿನ ರಂಗಕರ್ಮಿ ವೈ.ಎಂ.ಪುಟ್ಟಣ್ಣಯ್ಯ ಅವರಿಂದ ರಂಗಗೀತೆಗಳ ಪ್ರಸ್ತುತಿ ಕಾರ್ಯಕ್ರಮವಿದೆ.ಏಪ್ರಿಲ್ 4 ರಂದು ಬೆಳಿಗ್ಗೆ ಸಿಡಿಸೇವೆ, ವಸಂತೋತ್ಸವ ಮತ್ತು ಸಂಜೆ ಉಯ್ಯಾಲೋತ್ಸವ ನಡೆಯಲಿದ್ದು, ಬೆಂಗಳೂರಿನ ವಿದುಷಿ ಅಂಜಲಿ ಶ್ರೀರಾಂ ಅವರಿಂದ ಕರ್ನಾಟಕ ಸಂಗೀತ ಕಚೇರಿ ಏರ್ಪಡಿಸಲಾಗಿದೆ. ಮೇ 5 ರ ಬಾನುವಾರ ಸತ್ಯನಾರಾಯಣ ಪೂಜೆ, ಮೇ 6 ರಂದು ವಿಶೇಷ ಪುಷ್ಪಯಾಗ, ಸಂಜೆ ಸ್ವರ್ಣ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆದ ನಂತರ ಊರಿನ ಆಲಯ ಪ್ರವೇಶದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ ಅವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವ ಮೂಲಕ ಶಾಂತಿಯುತ ಜಾತ್ರೆ ನಡೆಯಲು ಸಹಕಾರ ನೀಡಬೇಕು ಎಂದು ಕೋರಿದರು. ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ ಮತ್ತು ಮಂಡಳಿ ಸದಸ್ಯರು ಇದ್ದರು.

28ಕೆಕೆಡಿಯು2.ಶ್ರೀಸ್ವರ್ಣಾಂಬ ದೇವಿಯವರು.

Share this article