-ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ನಡೆದ ಕಾರ್ಯಕ್ರಮ
ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿ ಮತ್ತು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವತಿಯಿಂದ ಮಾಂಗಲ್ಯಭಾಗ್ಯ ಯೋಜನೆಯಡಿಯಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ಸತಿಪತಿಗಳಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಸಾಮೂಹಿಕ ವಿವಾಹದಲ್ಲಿ ಮಂಡ್ಯ ತಾಲೂಕಿನ ಒಂದು ಜೋಡಿ, ಮೈಸೂರು ತಾಲೂಕಿನ ಒಂದು ಜೋಡಿ, ನಂಜನಗೂಡು ತಾಲೂಕಿನ 3 ಜೋಡಿ, ನರಸೀಪುರ ತಾಲೂಕಿನ 2 ಜೋಡಿಯಾದರು.ದೇವಾಲಯದ ವತಿಯಿಂದ ವರನಿಗೆ ಶರ್ಟ್, ಪಂಚೆ ಕೊಂಡುಕೊಳ್ಳಲು 5 ಸಾವಿರ, ವಧುವಿಗೆ ಸೀರೆ, ಕುಪ್ಪಸ ಕೊಂಡುಕೊಳ್ಳಲು 10 ಸಾವಿರ ರು. ಗಳನ್ನು ಮತ್ತು 8 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 2 ಚಿನ್ನದ ಗುಂಡುಗಳನ್ನು ಉಚಿತವಾಗಿ ವಿತರಿಸಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನೂತನ ದಂಪತಿಗಳಿಗೆ ಮಾಂಗಲ್ಯ, ವಿತರಣೆ ಮಾಡಿದರು. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ಧೀಕ್ಷಿತ್, ನೇತೃತ್ವ ವಹಿಸಿದ್ದರು. ಶ್ರೀಕಂಠ ಜೋಯಿಷ್ ಅವರು ಮಂತ್ರಘೋಷ ನೆರವೇರಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ದೇವರ ಆಶೀರ್ವಾದದಿಂದ 8 ಜೋಡಿಗಳು ಸರಳ ಸಾಮೂಹಿಕ ವಿವಾಹದ ಮೂಲಕ ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿರುವುದು ಸಂತೋಷ, ನಿಮ್ಮ ವಿವಾಹ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರುತ್ತೇನೆ ಎಂದರಲ್ಲದೆ, ಮದುವೆಗಳಲ್ಲಿ ದುಂದು ವೆಚ್ಚವನ್ನು ತಪ್ಪಿಸಲು ಹಾಗೂ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಬಡವರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ನಗರಸಭಾ ಸದಸ್ಯರಾದ ಪ್ರದೀಪ್, ಗಾಯತ್ರಿ, ಎಸ್.ಪಿ. ಮಹೇಶ್, ಎನ್.ಎಸ್. ಯೋಗೀಶ್, ಯೋಗೀಶ್, ಸಿದ್ದಿಖ್, ದೇವಾಲಯದ ಇಓ ಜಗದೀಶ್, ಚಾಮುಂಡೇಶ್ವರಿ ದೇವಾಲಯದ ಇಒ ಕೃಷ್ಣ ಇದ್ದರು.