ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಘ ಶ್ರೀಶಾ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಎಸ್.ಗುರುರಾಜ್ ಅಧ್ಯಕ್ಷತೆಯಲ್ಲಿ ಶ್ರೀನಿವಾಸ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.ವಾರ್ಷಿಕ ವರದಿ ಮಂಡಿಸುತ್ತಾ ಮಾತನಾಡಿದ ಗುರುರಾಜ್, ಶ್ರೀಶಾ ಸೌಹಾರ್ದ ಸೊಸೈಟಿ ಕಳೆದ ವರ್ಷ 2025 - 26ನೇ ಸಾಲಿನಲ್ಲಿ 2.25 ಕೋಟಿ ರು. ನಿವ್ವಳ ಲಾಭ ಗಳಿಸಿ ದಾಖಲೆ ನಿರ್ಮಿಸಿದೆ. ಸಾಲದ ವಸೂಲಾತಿಯಲ್ಲಿ ಶೇ.98.5 ರ ಗುರಿ ತಲುಪಿರುವುದೇ ಇಷ್ಟು ಲಾಭ ಗಳಿಸಲು ಕಾರಣ ಎಂದರು.ಆರಂಭದಿಂದಲೂ ಸತತವಾಗಿ ಸಹಕಾರಿಗೆ ‘ಎ’ ಶ್ರೇಣಿ ದೊರೆಯುತ್ತಿದೆ. ಈ ವರ್ಷ ಶ್ರೀಶಾ ಸೊಸೈಟಿಯ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುತ್ತಿದೆ. ಸೊಸೈಟಿಯು ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಧನ ಸಹಾಯ ನೀಡುತ್ತಿದೆ. 2024ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಸಹಕಾರಿಯೆಂಬ ರಾಜ್ಯ ಪ್ರಶಸ್ತಿ ಶ್ರೀಶಾಗೆ ದೊರೆತಿದೆ ಎಂದರು.
ಪರಂಗಿಪೇಟೆಯ ಬಳಿಯ ಶ್ರೀಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮಕ್ಕೆ 20,000 ರು. ಚೆಕ್‌ನ್ನು ಸಂಸ್ಥೆಯ ಹರೀಶ್ ಪೆರಗಡೆ ಅವರಿಗೆ ನೀಡಲಾಯಿತು. ಕಿತ್ತಳೆ ಹಣ್ಣುಗಳನ್ನು ಮಾರಿ ಬಂದ ಹಣದ ಜೊತೆಗೆ ದಾನಿಗಳ ನೆರವಿನಿಂದ ಹರೇಕಳದಲ್ಲಿ ಶಾಲೆ ಆರಂಭಿಸಿದ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜಾ, ಶಾಖಾ ಪ್ರಭಂದಕರಾದ ದೀಪ್ತಿ, ಕುಸುಮಾ ಐತಾಳ್, ಲಕ್ಷ್ಮೀ ಮಹಾಸಭೆಯ ವಿವಿಧ ನಡಾವಳಿಗಳನ್ನು ಓದಿ, ದಾಖಲಿಸಿ ಸದಸ್ಯರ ಒಪ್ಪಿಗೆ ಪಡೆದರು. ಆರಂಭದಲ್ಲಿ ಕಳೆದ ವರ್ಷ ಅಗಲಿದ ಸದಸ್ಯರಿಗೆ ಮೌನಾಚರಣೆ ಮಾಡಲಾಯಿತು.ಶ್ರೀಶಾ ಸೊಸೈಟಿಯ ನಿರ್ದೇಶಕ ಸುರೇಶ್ ಬೈಂದೂರು ಸ್ವಾಗತಿಸಿದರು. ನಿರ್ದೇಶಕ ಪ್ರಸನ್ನ ಕುಮಾರ ವಂದಿಸಿದರು. ನಿರೂಪಕ ಆರ್.ಜಿ.ಪ್ರಸನ್ನ ಹಾಗೂ ವಿದ್ಯಾರಾವ್ ನಿರೂಪಿಸಿದರು. ರಂಜನಾ ಹೆಗಡೆ ಪ್ರಾರ್ಥಿಸಿದರು.