ಬಿಸಿಯೂಟ ಸೇವಿಸಿ ಅಸ್ವಸ್ಥ ಮಕ್ಕಳು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

KannadaprabhaNewsNetwork | Published : Jun 16, 2024 1:52 AM

ಸಾರಾಂಶ

ತಾಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಶಾಲೆಗಳಲ್ಲಿ ಶುಕ್ರವಾರ ಸಂಜೆ ಬಿಸಿಯೂಟದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಮಕ್ಕಳು ಗುಣಮುಖರಾಗಿ ಶನಿವಾರ ಮನೆಗೆ ಹಿಂತಿರುಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಶಾಲೆಗಳಲ್ಲಿ ಶುಕ್ರವಾರ ಸಂಜೆ ಬಿಸಿಯೂಟದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಮಕ್ಕಳು ಗುಣಮುಖರಾಗಿ ಶನಿವಾರ ಮನೆಗೆ ಹಿಂತಿರುಗಿದ್ದಾರೆ.

ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಶಾಲೆಯ ಮಕ್ಕಳು ದಾಖಲಾಗಿದ್ದು, ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದೋರನಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಈ ಪ್ರಕರಣ ಕುರಿತು ಸದಾ ಸಿದ್ಧತೆಯಲ್ಲಿರುವಂತೆ ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ್ ಗುತ್ತೇದಾರ್ ತಿಳಿಸಿದ್ದಾರೆ.

ಬಿಸಿಯೂಟ ಏಜೇನ್ಸಿಯ ವಿರುದ್ಧ ದೂರು ದಾಖಲು:

ವಾಂತಿ-ಭೇದಿ ಪ್ರಕರಣ ಕುರಿತು ಶಾಲೆಗಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸಿದ (ನಿರ್ಮಲಾದೇವಿ ಮಹಿಳಾ ಸಂಘ) ಖಾಸಗಿ ಏಜೆನ್ಸಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ತಿಳಿಸಿದ್ದಾರೆ.

ಅಧಿಕಾರಿಗಳಿಂದ ಆಹಾರ ಗುಣಮಟ್ಟ ಪರಿಶೀಲನೆ:

ಮಕ್ಕಳ ಆಸ್ವಸ್ಥತೆಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಗುಣಮಟ್ಟದ ಪರಿಶೀಲನ ಅಧಿಕಾರಿಗಳು, ಏಜೆನ್ಸಿ ವತಿಯಿಂದ ತಯಾರಿಸಲಾಗುವ ಆಹಾರ ಘಟಕಕ್ಕೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಪದಾರ್ಥಗಳು ಮತ್ತು ಅಡುಗೆ ತಯಾರಿಸುವ ಕೋಣೆ ಹಾಗೂ ಅಡುಗೆ ತಯಾರಿಸುವ ಸಾಮಾನುಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರಿಶೀಲನಾಧಿಕಾರಿ ನಾಗಣ್ಣ ವೆಂಕಟಪುರ ಅವರು ಮೇಲಾಧಿಕಾರಿಗಳ ನಿರ್ದೇಶನದಂತೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಮತ್ತು ಶಿಕ್ಷಣಾಧಿಕಾರಿ ಅಕ್ಷರ ದಾಸೋಹ ಯೋಜನೆ ಜಿಲ್ಲಾ ಪಂಚಾಯ್ತಿ ಯಾದಗಿರಿಯ ಈಶ್ವರ್ ನೀರಡಿಗಿಯವರು ಇದ್ದರು.

ಮಧ್ಯಾಹ್ನ ಬಿಸಿಯೂಟ ಬಿತ್ತರಿಸುವ ಏಜೆನ್ಸಿಯವರು ತಾವು ತಯಾರಿಸಿದ ಆಹಾರವನ್ನು ಮೊದಲು ತಾವು ಊಟ ಮಾಡಿ ಪರಿಶೀಲಿಸಿದ ನಂತರ ಮಕ್ಕಳಿಗೆ ನೀಡಬಹುದು ಎಂದು ಖಾತ್ರಿಪಡಿಸಿಕೊಂಡ ನಂತರ ಮಕ್ಕಳಿಗೆ ವಿತರಿಸುವ ನಿಯಮವಿದೆ. ನಂತರ ಊಟ ವಿತರಿಸಿದ ಶಾಲೆಯಲ್ಲಿಯು ಮೊದಲು ಶಿಕ್ಷಕರು ಊಟ ಮಾಡಿದ ನಂತರ ಮಕ್ಕಳಿಗೆ ವಿತರಿಸಬೇಕು ಎನ್ನುವ ನೇಮವಿದೆ. ಈ ಘಟನೆಗೆ ಕಾರಣ ಏನೆಂಬುದು ಅಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ಶಿಕ್ಷಣಾಧಿಕಾರಿ ಅಕ್ಷರ ದಾಸೋಹ ಯೋಜನೆ ಜಿಲ್ಲಾ ಪಂಚಾಯತ್ ಯಾದಗಿರಿಯ ಈಶ್ವರ್ ನೀರಡಿಗಿಯವರು ತಿಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಭೇಟಿ ಪರಿಶೀಲನೆ: ಈ ಘಟನೆಗೆ ಸಂಬಂಧಿಸಿದಂತೆ, ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ ಬಿರಾದಾರ್ ಅವರ ತಂಡ ದೋರನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಅಗಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಮತ್ತು ಮಹಾಂತೇಶ್ವರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದ ನಂತರ ನಗರದಲ್ಲಿರುವ ಏಜೆನ್ಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಎಸ್ಪಿ ಅವರ ನಿರ್ದೇಶನದ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಮತ್ತು ಇಲ್ಲಿನ ಪರಿಶೀಲನಾ ವರದಿಯನ್ನು ನಮ್ಮ ಎಸ್ಪಿ ಅವರಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

Share this article