ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ ಕಾಡಾನೆ ಹಾವಳಿ ನಿಯಂತ್ರಿಸಿ: ವೆಂಕಟ್ ರಾಜಾ

KannadaprabhaNewsNetwork | Published : Jun 16, 2024 1:52 AM

ಸಾರಾಂಶ

ವೈಜ್ಞಾನಿಕ ಯೋಜನೆ ರೂಪಿಸಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳ ಉಪಟಳ ನಿಯಂತ್ರಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸುದೀರ್ಘ ಚರ್ಚೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಕಾಡಾನೆ ಹಾವಳಿ ನಿಯಂತ್ರಿಸುವ ಸಂಬಂಧ ಸೋಲಾರ್ ತಂತಿ ಬೇಲಿ ಅಳವಡಿಸುವುದು, ಟ್ರಂಚ್‌ಗಳ ನಿರ್ಮಾಣ, ರೈಲ್ವೆ ಬ್ಯಾರಿಕೇಡ್... ಹೀಗೆ ಹಲವು ಕ್ರಮ ಕೈಗೊಳ್ಳಬಹುದು ಎಂದರು.

ಕೊಡಗು ವನ್ಯಜೀವಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕರ್ನಲ್(ನಿ) ಸಿ.ಪಿ.ಮುತ್ತಣ್ಣ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಚಲನವಲನಗಳ ಬಗ್ಗೆ ದಿನನಿತ್ಯ ಗಮನಹರಿಸಿ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.

ಕಾಡಾನೆ ಹಾವಳಿಯಿಂದ ಕೃಷಿ ಬೆಳೆ ಸಂರಕ್ಷಿಸುವಲ್ಲಿ ಅಗತ್ಯ ಕ್ರಮ ವಹಿಸಬೇಕಿದೆ. ಹಾಗೆಯೇ ಸ್ಥಳೀಯರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿ, ಕಾಡಾನೆಗಳಿಂದ ರಕ್ಷಿಸಬೇಕಿದೆ ಎಂದು ಮುತ್ತಣ್ಣ ಅವರು ಸಲಹೆ ಮಾಡಿದರು.

ಹೆಚ್ಚಿನ ತೊಂದರೆ ನೀಡುವ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ವನ್ಯಪ್ರಾಣಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಹಾಡಿಗಳಲ್ಲಿ ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಕರ್ನಲ್(ನಿ) ಮುತ್ತಣ್ಣ ಅವರು ಮನವಿ ಮಾಡಿದರು.‘ನಾಗರಹೊಳೆ-ಬ್ರಹ್ಮಗಿರಿ ವ್ಯಾಪ್ತಿಯ ಕುಟ್ಟ ಬಳಿ ಆನೆ ಕಾರಿಡಾರ್ ನಿರ್ಮಿಸಿದಲ್ಲಿ ನಾಡಿಗೆ ಬರುವ ಕಾಡಾನೆಗಳನ್ನು ತಡೆಯಬಹುದಾಗಿದೆ ಎಂದು ಕರ್ನಲ್(ನಿ) ಮುತ್ತಣ್ಣ ಅವರು ಅಭಿಪ್ರಾಯಪಟ್ಟರು.

ವಯಸ್ಸಾದ ಹಾಗೂ ಗಾಯಗೊಂಡಿರುವ ಹುಲಿಗಳನ್ನು ಗುರುತಿಸಿ ಅಂತಹ ಹುಲಿಗಳಿಗೆ ಕಾಲರ್‌ಗಳನ್ನು ಅಳವಡಿಸುವಂತಾಗಬೇಕು. ಇದರಿಂದ ಜನ-ಜಾನುವಾರುಗಳ ರಕ್ಷಣೆ ಮಾಡಬಹುದಾಗಿದೆ ಎಂದು ಮುತ್ತಣ್ಣ ಅವರು ಸಲಹೆ ಮಾಡಿದರು.

ಅರಣ್ಯ ಪ್ರದೇಶದಲ್ಲಿ ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸಬೇಕು. ಅರಣ್ಯ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಈ ಸಂದರ್ಭ ಹೇಳಿದರು.

ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಅವರು ಮಲೆನಾಡು ಭಾಗದಲ್ಲಿ ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಿದರು.

ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವು ಅತೀ ಮುಖ್ಯ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮೇವು ಮತ್ತು ಕುಡಿಯುವ ನೀರು ಲಭ್ಯವಾಗುವಂತೆ ಮಾಡಬೇಕು. ಆನೆಗಳು 200 ಕಿ.ಮೀ.ವರೆಗೆ ಸಂಚಾರ ಮಾಡುತ್ತವೆ ಎಂದು ಸಂಜಯ್ ಗುಬ್ಬಿ ಅವರು ಹೇಳಿದರು.

ನಾಗರಹೊಳೆ ಹುಲಿಯೋಜನೆ ನಿರ್ದೇಶಕರಾದ ಹರ್ಷಕುಮಾರ್ ಅವರು ಮಾತನಾಡಿ ಕಾಡಾನೆ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ಮಾತನಾಡಿ ಕಾಡಾನೆಗಳು ಸಂಚರಿಸುವ ಮಾರ್ಗದಲ್ಲಿ ಬೆಳಗಿನ ಜಾವದಲ್ಲಿ ಮತ್ತು ಹೆಚ್ಚಿನ ಮಂಜು ಆವರಿಸುವ ಸಂದರ್ಭ ಸಾರ್ವಜನಿಕರು ಓಡಾಡುವುದನ್ನು ತಪ್ಪಿಸಬೇಕು. ಇದರಿಂದ ಸಾಕಷ್ಟು ಸುರಕ್ಷತೆ ಕಾಪಾಡಬಹುದಾಗಿದೆ ಎಂದು ಹೇಳಿದರು.

ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಅವರು ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಲಾಖೆಯಿಂದ ಸೋಲಾರ್ ಲೈಟ್ ಮತ್ತಿತರ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣ ಅಗತ್ಯ ಎಂದು ಕೂರ್ಗ್ ವೈಲ್ಡ್ ಲೈಫ್‌ ಸೊಸೈಟಿಯ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇತರರು ಇದ್ದರು.

Share this article