ಕನ್ನಡಪ್ರಭ ವಾರ್ತೆ ತುಮಕೂರು
ತ್ರಿವಿಧ ದಾಸೋಹಮಠ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ 2026ರ ಫೆಬ್ರವರಿ 6ರಿಂದ 20ರವರೆಗೆ 15 ದಿನಗಳ ಕಾಲ ನಡೆಯಲಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಯಶಸ್ಸಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ವಸ್ತುಪ್ರದರ್ಶನವು ಜಿಲ್ಲೆಯ ಸಮಗ್ರ ಚಿತ್ರಣವನ್ನು ನೀಡುವುದರ ಜೊತೆಗೆ, ಯುವ ಜನತೆಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.
ಪ್ರತಿ ವರ್ಷ ಸಂಜೆ ವಸ್ತು ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಬೆಳಗ್ಗೆ 11 ಗಂಟೆಯಿಂದಲೇ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ಅವರು, ತೋಟಗಾರಿಕೆ, ಕೃಷಿ, ಪಶುವೈದ್ಯ, ಆರೋಗ್ಯ, ಕೈಗಾರಿಕೆ, ಅರಣ್ಯ, ರೇಷ್ಮೆ, ಮೀನುಗಾರಿಕೆ, ಶಿಕ್ಷಣ, ಜವಳಿ ಮತ್ತು ಕೈಮಗ್ಗ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡಾ, ಪ್ರವಾಸೋದ್ಯಮ, ಕಾರ್ಮಿಕ ಇಲಾಖೆಗಳು ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳು, ಕೃಷಿಕರು, ಕೈಗಾರಿಕೋದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆ ಹಾಗೂ ಇಲಾಖೆಗಳು ನೀಡುವ ಸವಲತ್ತುಗಳ ಬಗ್ಗೆ ಜನಪರ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಮೌಲ್ಯವರ್ಧಿತ ವಸ್ತುಗಳ ದರ್ಶನ:
ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವಂತಹ ನೈಸರ್ಗಿಕ ಕೃಷಿ, ಕೃಷಿಯಲ್ಲಿ ಹೊಸ ತಳಿಗಳನ್ನು ಜನರಿಗೆ ಪರಿಚಯಿಸುವ ಮತ್ತು ನಮ್ಮ ಜಿಲ್ಲೆ ಕಲ್ಪತರು ಎಂದೇ ಪ್ರಸಿದ್ಧಿ ಪಡೆದಿದ್ದು, ಅದರಿಂದ ಆಗುವ ಅನುಕೂಲ, ಮಹತ್ವ ತಿಳಿಸುವ ವ್ಯವಸ್ಥೆ, ಗಣಿತ, ವಿಜ್ಞಾನ, ಕ್ರೀಡೆಗಳನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿ ಕೈಮಗ್ಗದಿಂದ ತಯಾರಾಗುವ ರೇಷ್ಮೆ ಸೀರೆಗಳು ಹಾಗೂ ಮಗ್ಗದ ಮಾದರಿಯನ್ನು ಪ್ರದರ್ಶನ ಮಾಡಬೇಕು. ಜಿಲ್ಲೆಯಲ್ಲಿ ತಯಾರಾಗುವ ಕರಕುಶಲ ಮೌಲ್ಯ ವರ್ಧಿತ ವಸ್ತುಗಳ ಪ್ರದರ್ಶನ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿ:
ಮಕ್ಕಳ ಅತ್ಯಂತ ಆಕರ್ಷಣೆ ಅಕ್ವೇರಿಯಂ ಆಗಿದ್ದು, ಹಾಗಾಗಿ ವಿವಿಧ ಬಗೆಯ ಮೀನಿನ ತಳಿಗಳನ್ನು ಪ್ರದರ್ಶಿಸಬೇಕು. ಸಸ್ಯ ಕ್ಷೇತ್ರ, ಚಿಣ್ಣರ ವನ್ಯ ದರ್ಶನ, ಪ್ರಾಣಿ- ಪಕ್ಷಿಗಳ ಸಂಪತ್ತು ಸೃಷ್ಟಿಸಿ ನೋಡುಗರಿಗೆ ಅತ್ಯಂತ ಆಕರ್ಷಣೀಯವಾಗಿ ಕಾಣುವಂತಾಗಬೇಕು. ದೇಶಿಯ ವಸ್ತುಗಳ ಈ ಪ್ರದರ್ಶನವು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಬೇಕು. ಯಶಸ್ವಿ ಕೈಗಾರಿಕೋದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳು ಭಾಗವಹಿಸುವಂತೆ ಉತ್ತೇಜಿಸಬೇಕು ಎಂದರಲ್ಲದೆ, ಕೃಷಿ ಕ್ಷೇತ್ರದ ತಾಂತ್ರಿಕತೆ, ಆಧುನಿಕತೆ, ವೈವಿಧ್ಯಮಯ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸಮಗ್ರ ಬೆಳೆ ನಿರ್ವಹಣೆ, ಕೃಷಿ ಉಪಕರಣಗಳು, ಇತ್ತೀಚಿನ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಬೆಳೆಯುವ ಬೆಳೆ, ತಂತ್ರಜ್ಞಾನ ಆಧಾರಿತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.15 ದಿನಗಳ ಕಾಲ ನಡೆಯಲಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ತಾಲೂಕಿನಿಂದ ಶಾಲಾ ಮಕ್ಕಳನ್ನು ಕರೆತರಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಮಕ್ಕಳು ತಮ್ಮ ಪಠ್ಯ ಪುಸ್ತಕಗಳಲ್ಲಿ ಕಲಿತ ವಿಷಯಗಳ ಜೊತೆಗೆ, ವಾಸ್ತವ ಪ್ರಪಂಚದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಔದ್ಯಮಿಕ ಬೆಳವಣಿಗೆಗಳನ್ನು ಕಣ್ಣಾರೆ ನೋಡಲು ವಸ್ತು ಪ್ರದರ್ಶನ ಸಹಾಯಕವಾಗಲಿದೆ ಎಂದರು.
ಶ್ರೀ ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಕಾರ್ಯದರ್ಶಿ ಡಿ. ಗಂಗಾಧರಯ್ಯ, ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಟ್ರಸ್ಟ್ ಜಂಟಿ ಕಾರ್ಯದರ್ಶಿ ಎಸ್. ಶಿವಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ಬಾಕ್ಸ್..
ಪರಮಪೂಜ್ಯರ ಪುತ್ಥಳಿ ಪ್ರತಿಷ್ಠಾಪನೆ:ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪದ ಫಲವಾಗಿ ಆರಂಭವಾದ ಸಿದ್ಧಗಂಗಾ ವಸ್ತುಪ್ರದರ್ಶನವು ಇದೀಗ ಯಶಸ್ವಿಯಾಗಿ 60 ವರ್ಷಗಳ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಈ ಹಿಂದೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿತ್ತು. ಪ್ರಸ್ತುತ ೬೦ ವರ್ಷಗಳು ಪೂರ್ಣಗೊಂಡಿರುವ ಈ ಶುಭ ಸಂದರ್ಭದಲ್ಲಿ, ವಸ್ತುಪ್ರದರ್ಶನ ಸಮಿತಿಯು ವಜ್ರಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.2026ರ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ಸಮಯದಲ್ಲಿ ಈ ವಜ್ರಮಹೋತ್ಸವ ಸಮಾರಂಭವು ಲಿಂಗೈಕ್ಯ, ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳವರ ಅಮೃತ ಶಿಲೆಯ ಪುತ್ಥಳಿಯನ್ನು ವಸ್ತುಪ್ರದರ್ಶನದ ಆವರಣದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ವಸ್ತು ಪ್ರದರ್ಶನಕ್ಕೆ ಇನ್ನಷ್ಟು ಮೆರಗನ್ನು ತರಲಿದೆ ಎಂದು ಜಿಪಂ ಸಿಇಒ ಪ್ರಭು ಹೇಳಿದರು.