ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನ ಬುಧವಾರ ಮಹೋತ್ಸವದ ಮುಖ್ಯ ದಿನವಾಗಿದ್ದು, ಬೆಳಗ್ಗೆಯಿಂದ ತಡರಾತ್ರಿ ತನಕ ಲಕ್ಷಾಂತರ ಭಕ್ತರು ಪುಣ್ಯಕ್ಷೇತ್ರಕ್ಕೆ ಹರಿದುಬಂದರು. ಪವಾಡ ಪುರುಷ ಸಂತ ಲಾರೆನ್ಸ್ ಕ್ಷೇತ್ರದಲ್ಲಿ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಲು

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನ ಬುಧವಾರ ಮಹೋತ್ಸವದ ಮುಖ್ಯ ದಿನವಾಗಿದ್ದು, ಬೆಳಗ್ಗೆಯಿಂದ ತಡರಾತ್ರಿ ತನಕ ಲಕ್ಷಾಂತರ ಭಕ್ತರು ಪುಣ್ಯಕ್ಷೇತ್ರಕ್ಕೆ ಹರಿದುಬಂದರು. ಪವಾಡ ಪುರುಷ ಸಂತ ಲಾರೆನ್ಸ್ ಕ್ಷೇತ್ರದಲ್ಲಿ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಲು ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು.ಭಕ್ತರ ಅಪಾರ ಸಂಖ್ಯೆಯ ಕಾರಣ ವಾಹನಗಳನ್ನು ದೂರದಲ್ಲಿ ನಿಲುಗಡೆ ಮಾಡಲಾಗಿದ್ದು, ಭಕ್ತರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಬಸಿಲಿಕಾ ತಲುಪಿದರು. ಸಾಂಪ್ರದಾಯಿಕವಾಗಿ ಬಲಿಪೂಜೆಗೆ ಮುನ್ನ ಪಾಪನಿವೇದನಾ ಸಂಸ್ಕಾರ ನೆರವೇರಿತು. ಯಾಜಕರು ರೋಗಿಗಳು ಹಾಗೂ ಮಕ್ಕಳ ಮೇಲೆ ಹಸ್ತವಿಟ್ಟು ಆಶೀರ್ವಾದ ನೀಡಿ ಅವರ ಆರೋಗ್ಯ ಹಾಗೂ ಸುಭಿಕ್ಷೆಗೆ ಪ್ರಾರ್ಥಿಸಿದರು.

ಮಹೋತ್ಸವದ ಅಂಗವಾಗಿ ಎರಡು ಪ್ರಮುಖ ಬಲಿಪೂಜೆಗಳು ಜರುಗಿದವು. ಬೆಳಗ್ಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೋ ಬಲಿಪೂಜೆ ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜ್ಜರ್‌ನ ನೂತನ ಧರ್ಮಾಧ್ಯಕ್ಷ ವಂ. ಡಾ. ಜಾನ್ ಕಾರ್ಮಾರೋ ನೆರವೇರಿಸಿದರು. ‘ನಾನು ನಿಮ್ಮನ್ನು ಪ್ರೀತಿಸಿದ್ದೇನೆ’ ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿದ ಅವರು, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ ಅದನ್ನು ದೀನದುರ್ಬಲರೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದರು.

ಇತರ ಬಲಿಪೂಜೆಗಳನ್ನು ವಂ. ಸ್ಟೀವನ್ ಫರ್ನಾಂಡಿಸ್, ವಂ. ಅನಿಲ್ ಲೋಬೋ, ವಂ. ಕ್ಲಾನಿ ಡಿಸೋಜಾ, ವಂ. ಸುನಿಲ್ ಪಿಂಟೊ, ವಂ. ಪ್ರದೀಪ್ ಕಾರ್ಡೋಜಾ, ವಂ. ರೋಹಿತ್ ಡಿಕೋಸ್ಟಾ ಹಾಗೂ ವಂ. ರೋಷನ್ ಡಯಾಸ್ ಸೇರಿದಂತೆ ವಿವಿಧ ಯಾಜಕರು ನೆರವೇರಿಸಿ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳು, ಸಹಾಯಕ ಯಾಜಕರು ಹಾಗೂ ಎಲ್ಲ ಭಕ್ತರಿಗೆ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ಶ್ರೀಮತಿ ರಡ್ಡಿ ಭೇಟಿ ನೀಡಿ ಉತ್ಸವದ ಶುಭಾಶಯಗಳನ್ನು ಕೋರಿದರು.ಗುರುವಾರ ಸಂಪ್ರದಾಯದಂತೆ ‘ಕೃತಜ್ಞತೆಯ ತಾಯಿ’ಯಾದ ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ನಡೆಯಲಿದ್ದು, ಸಂಜೆ 6 ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಬಳಿಕ ‘ಜಗತ್ ಜ್ಯೋತಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.