ಹಗರಿಬೊಮ್ಮನಹಳ್ಳಿ: ಶಬ್ದಗಳ ಬ್ರಹ್ಮ ಎಂದು ಕರೆಯಲ್ಪಡುತ್ತಿದ್ದ ದಿ.ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಲ್ಲಿ ಸೃಷ್ಠಿ ಶಕ್ತಿ ಲಯ ಗುರುವಿನ ಶಕ್ತಿ ಅಡಗಿತ್ತು ಎಂದು ಬಾಚಿಗೊಂಡನಹಳ್ಳಿ ಕೌದಿ ಮಹಾಂತೇಶ್ವರ ಮಠದ ತೋಂಟದ ಶಿವಮಹಾಂತ ಸ್ವಾಮೀಜಿ ತಿಳಿಸಿದರು.
ಕಾಯಕ ಪ್ರೀತಿ, ತಾಳ್ಮೆಯಿಂದ ಯಶಸ್ವಿಯಾಗಬಹುದು. ಸಿದ್ದಲಿಂಗ ಶ್ರೀಗಳು ಶೈಕ್ಷಣಿಕ ಕಾಳಜಿ, ಪರಿಸರ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದರು. ಸಮಾಜಕ್ಕಾಗಿ ದುಡಿದ ಅವರನ್ನು ನಿರಂತರವಾಗಿ ಸ್ಮರಿಸಿಕೊಳ್ಳಲೆಬೇಕು. ಉಪಮಾತೀತರಾಗಿದ್ದ ಅವರನ್ನು ಮಾತಿನಲ್ಲಿ ವರ್ಣೀಸಲು ಅಸಾಧ್ಯ. ಬಾಚಿಗೊಂಡನಹಳ್ಳಿ ತಂಬ್ರಹಳ್ಳಿ ಗ್ರಾಮಗಳ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಮಾಜಿ ಶಾಸಕ ಗಾಂಧಿವಾದಿ ದಿ.ಚನ್ನಬಸವನಗೌಡ್ರು, ದಾನಿ ತಂಬ್ರಹಳ್ಳಿ ಅಕ್ಕಿ ಕೊಟ್ರಪ್ಪನವರ ಮಾತುಗಳನ್ನು ಚಾಚುತಪ್ಪದೆ ಪಾಲಿಸಿದ್ದರು. ಸಮಾಜದಲ್ಲಿನ ಮೌಢ್ಯತೆಯನ್ನು ತೊಲಗಿಸುವ ಅವರ ಪ್ರಯತ್ನ ನಿರಂತರವಾಗಿತ್ತು. ವೈದಿಕ ಪರಂಪರೆಯ ಹಾದಿಯಲ್ಲಿ ಬಸವ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿದ್ದರು ಎಂದರು.
ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಕೆ.ರೋಹಿತ್ ಮಾತನಾಡಿ, ದಿ.ಸಿದ್ದಲಿಂಗ ಸ್ವಾಮೀಜಿಯಂತವರು ಸಮಾಜದಲ್ಲಿ ಸಿಗುವುದು ಕೋಟಿಗೊಬ್ಬರು. ಸ್ವಾಮೀಜಿಯವರ ಜೀವನೋತ್ಸಾಹ ಇಂದಿನವರಿಗೆ ಪ್ರೇರಣೆಯಾಗುವಂತಿದೆ. ಬಾಚಿಗೊಂಡನಹಳ್ಳಿಯಲ್ಲಿ ಯಾವುದೇ ಗುಡಿಗೋಪುರ ನಿರ್ಮಾಣ ಮಾಡದೆ, ಪ್ರೌಢಶಾಲೆಯನ್ನು ನಿರ್ಮಿಸಿ ಉತ್ತಮ ಶಿಕ್ಷಣ ನೀಡಲು ಅಡಿಪಾಯ ಹಾಕಿದರು. ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡು ಗಮನಸೆಳೆದಿದ್ದರು. ಜಾತಿ ಪಡುಗು ತೊಲಗಿಸಲು ತಾವೇ ಸ್ವತ: ಮುಂದಾಳತ್ವ ವಹಿಸಿ ಮಾದಿಗ ಸ್ವಾಮೀಜಿಯ ಪಟ್ಟಾಧಿಕಾರಿ ಮಾಡಿದ್ದರು. ಮಾತಿನಂತೆ ನಡೆದುಕೊಳ್ಳಬೇಕು ಎನ್ನುವ ಸಿದ್ದಾಂತವನ್ನು ಮೈಗೂಡಿಸಿಕೊಂಡಿದ್ದರು. ಮೌಢ್ಯತೆ, ಧಾರ್ಮಿಕ ಕಠಿಣ ಕಟ್ಟಳೆಗಳನ್ನು ಕೊನೆಯವರೆಗೂ ವಿರೋಧಿಸಿದ್ದರು ಎಂದು ತಿಳಿಸಿದರು.ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ಗದುಗಿನ ತೋಂಟದಾರ್ಯ ಮಠಕ್ಕೆ ಅಕ್ಕಿ ಬಸಮ್ಮ ಚಾರಿಟಬಲ್ ಟ್ರಸ್ಟ್ನಿಂದ ೧ಕೋಟಿರೂ ದೇಣಿಗೆ ನೀಡಿದ್ದು, ವರ್ಷಕ್ಕೊಮ್ಮೆ ದಿ.ಅಕ್ಕಿ ಮಂಜುನಾಥ ಹೆಸರಿನಲ್ಲಿ ಶಿವಾನುಭವ ಕಾರ್ಯಕ್ರಮ ಮಾಡುತ್ತಾರೆ. ಸಿದ್ದಲಿಂಗ ಸ್ವಾಮಿಗಳು ತಂಬ್ರಹಳ್ಳಿಯಲ್ಲಿ ಮಠನಿರ್ಮಾಣ ಮಾಡಬೇಕು, ಐಟಿಐ ಕಾಲೇಜು ತೆರೆಯಬೇಕು ಎಂಬು ಮಹಾದಾಸೆ ಹೊಂದಿದ್ದರು. ಅವರ ಶೈಕ್ಷಣಿಕ, ಪರಿಸರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು ಎಂದರು.
ಎಬಿಟಿಎA ಕಾಲೇಜಿನ ನಿವೃತ್ತ ಪಾಂಶುಪಾಲ ಚಿಗಟೇರಿ ಚನ್ನಬಸಪ್ಪ, ಗುತ್ತಿಗೆದಾರ ಆರ್.ಕೇಶವರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ಮುಖ್ಯಗುರು ವಿ.ಪ್ರಕಾಶಪ್ಪ, ತಂಬ್ರಹಳ್ಳಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಯಳಕಪ್ಪನವರ, ಗುತ್ತಿಗೆದಾರ ಉಮಾಪತಿ, ರೈತಸಂಘದ ಗಡ್ಡಿ ನಿಂಗಪ್ಪ, ಪ್ರಾಂಶುಪಾಲ ನಾಗಲಿಂಗಸ್ವಾಮಿ, ಶಿಕ್ಷಕ ಬಸಯ್ಯ, ಶಾಲಾ ಸಮಿತಿಯ ಗುರುಮೂರ್ತಿ, ಅನಿಲ್ ಕುಮಾರ, ದೊಡ್ಡಬಸಪ್ಪ, ಹೊಸಕೇರಿ ವಿರುಪಾಕ್ಷಪ್ಪ, ಕಲ್ಮನಿ ವಿರುಪಾಕ್ಷಪ್ಪ, ಸಜ್ಜಿ ಯಶೋಧ, ಬಾವಿಹಳ್ಳಿ ಕೊಟ್ರೇಶ, ನವಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಗಳೂರು ದೊಡ್ಡಬಸಪ್ಪ, ಒಂಟಿ ಮೇಘರಾಜ, ಜಿ,ಕೊಟ್ರೇಶ, ಯಲ್ಲಾಪುರ ಸುರೇಶ ಇತರರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ವೀರಣ್ಣ ಹಲಗಿ, ಬಸವರಾಜ ಹಡಪದ, ಶಾಲಾ ವಿದ್ಯಾರ್ಥಿಗಳು ನಿರ್ವಹಿಸಿದರು.