ಬರ ಪರಿಹಾರಕ್ಕಾಗಿ ಸುಪ್ರೀಂಗೆ ಧನ್ಯವಾದ: ಸಿದ್ದರಾಮಯ್ಯ

KannadaprabhaNewsNetwork |  
Published : Apr 28, 2024, 01:20 AM ISTUpdated : Apr 28, 2024, 07:06 AM IST
Siddaramaiah

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದಗಳು. ಬರ ಪರಿಹಾರಕ್ಕಾಗಿ ನೀಡಿರುವ ಈ ಹಣ ಸಾಲದು. ಬಾಕಿ ಪರಿಹಾರ ಹಣಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದಗಳು. ಬರ ಪರಿಹಾರಕ್ಕಾಗಿ ನೀಡಿರುವ ಈ ಹಣ ಸಾಲದು. ಬಾಕಿ ಪರಿಹಾರ ಹಣಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಕರ್ನಾಟಕದ ಮೇಲಿನ ಕಾಳಜಿಯಿಂದ ಈ ಪರಿಹಾರ ನೀಡಿಲ್ಲ. ನಾವು ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ಗೆ ಕೇಂದ್ರವು ರಾಜಕೀಯ ದುರುದ್ದೇಶದಿಂದ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ.

ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು ಸುಪ್ರೀಂಕೋರ್ಟ್‌ ವಚನ ನೀಡಿತ್ತು. ಅದನ್ನು ಪಾಲಿಸಲು ಒಲ್ಲದ ಮನಸ್ಸಿನಿಂದ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ.

ಇನ್ನು ಎನ್‌ಡಿಆರ್‌ಎಫ್‌ ನಿಯಮವಾಳಿ ಪ್ರಕಾರ ರಾಜ್ಯಕ್ಕೆ 18,171 ಕೋಟಿ ರು. ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ 3498 ಕೋಟಿ ರು. ನೀಡಿದೆ. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

ಬಿಜೆಪಿಯ ಪಾತ್ರವಿಲ್ಲ, ಸುಪ್ರೀಂ ಕಾಳಜಿಯ ಫಲ:

ಕೇಂದ್ರವು ಬರ ಪರಿಹಾರ ಬಿಡುಗಡೆ ಮಾಡಿರುವುದರಲ್ಲಿ ನಾಯಕರದ್ದಾಗಲಿ, ಕೇಂದ್ರ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಇದು ಕೃಷಿ ಕ್ಷೇತ್ರ ಮತ್ತು ರಾಜ್ಯದ ರೈತರ ಮೇಲೆ ಸುಪ್ರೀಂಕೋರ್ಟ್ ಇಟ್ಟುಕೊಂಡಿರುವ ಕಾಳಜಿಯ ಫಲ. ಸ್ವಲ್ಪವಾದರೂ ಪರಿಹಾರವನ್ನು ನೀಡದೆ ಇದ್ದರೆ ರೊಚ್ಚೆದ್ದಿರುವ ಕರ್ನಾಟಕದ ಜನ ಚುನಾವಣಾ ಪ್ರಚಾರಕ್ಕಾಗಿ ತಮ್ಮನ್ನು ರಾಜ್ಯಕ್ಕೆ ಕಾಲಿಡಲು ಬಿಡಲಾರರು ಎಂಬ ಭಯವೂ ಈ ಪರಿಹಾರ ಘೋಷಿಸಲು ಕಾರಣವಾಗಿದೆ.

ಈ ಅಲ್ಪ ಪರಿಹಾರವನ್ನು ತಮ್ಮ ಸಾಧನೆ ಎಂದು ರಾಜ್ಯದ ಬಿಜೆಪಿ ನಾಯಕರು ಬಿಂಬಿಸಲು ಹೊರಟರೆ ರಾಜ್ಯದ ಜನ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಈ ಬರ ಪರಿಹಾರ ಬಿಡುಗಡೆಯ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಜತೆಗೆ ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡಾ ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ