ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಸಮುದಾಯದ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು, ನೌಕರರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಬಸವ ತತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ಧರಾಮೇಶ್ವರರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನು- ಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣನಿಸುತ್ತದೆ.ಭಾರತ ದೇಶವು ಸಾಂಸ್ಕೃತಿಕ, ಸಂಪ್ರದಾಯಗಳ ನಾಡು. ಈ ನಾಡಿನಲ್ಲಿ ಹಲವಾರು ಜಾತಿ, ಪಂಗಡಗಳಿದ್ದು, ಸರ್ವರೂ ಒಂದೇ ಎಂಬ ಭಾವನೆಯಿಂದ ಮಹನೀಯರು, ಸಾಧುಗಳು, ಋಷಿ ಮುನಿಗಳು ದೇಶದ ಏಕತೆಗೆ, ಏಳಿಗೆಗೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಶ್ರೀ ಗುರುಸಿದ್ಧರಾಮೇಶ್ವರರು ಭಾರತ ದೇಶದ ಪ್ರಜೆಗಳು ಶಾಂತಿ, ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸಬೇಕು ಎಂದು ತೋರಿಸಿಕೊಟ್ಟ ಆದರ್ಶಗಳು, ಮಾರ್ಗಗಳು, ಗುರುಗಳು ರಚಿಸಿದ ವಚನಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದು ಅವರ ಸೇವೆಯನ್ನು ಸ್ಮರಿಸಿದರು.
ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಸಿದ್ಧರಾಮೇಶ್ವರರ ಕೊಡುಗೆ ಅಪಾರವಾಗಿದೆ. ವಚನ ಸಾಹಿತ್ಯ ರೂಪದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದರು. ಅಕ್ಕಮಹಾದೇವಿ, ಬಸವಣ್ಣ ಮುಂತಾದವರು ಅನುಭವ ಮಂಟಪದಲ್ಲಿ ಸಮಾಜದ ಬದಲಾವಣೆಗೆ ಹೆಚ್ಚು ಒತ್ತುಕೊಟ್ಟರು. ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಸಮುದಾಯ ಮುಂದುವರಿಯಲು ಸಾದ್ಯವೆಂದು ತಿಳಿಸಿದರು.
ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ಸನ್ಮಾನ ಮಾಡಲಾಯಿತು.