ಕನ್ನಡಪ್ರಭ ವಾರ್ತೆ, ತುಮಕೂರು
ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ ಅಂಗವಾಗಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದಲ್ಲಿ ನಗರದ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಮಠದಲ್ಲಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಶಿವರಾತ್ರಿಯ ರಾತ್ರಿ ನಡೆದ ಅಂತಿಮ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಪ್ರಬಲ ಪೈಪೋಟಿ ನೀಡಿ ಪುರುಷರ ಶಿವಮೊಗ್ಗ ತಂಡ ಹಾಗೂ ಮಹಿಳೆಯರ ಚಿಕ್ಕಮಗಳೂರು ತಂಡಗಳು ಎರಡನೇ ಸ್ಥಾನ ಗಳಿಸಿ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಸ್ವೀಕರಿಸಿದವು. ಪಂದ್ಯಾವಳಿಯಲ್ಲಿ ಪುರುಷರ 20 ಹಾಗೂ ಮಹಿಳೆಯರ 4 ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯೂ ಬೌದ್ಧಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಕ್ಷಣ ಪಡೆಯಬೇಕು. ಈ ಮೂರರಲ್ಲೂ ಸಮರ್ಥ ಶಿಕ್ಷಣ ಪಡೆದರೆ ಅದು ಪರಿಪೂರ್ಣ ಶಿಕ್ಷಣವಾಗುತ್ತದೆ. ಪಠ್ಯಪುಸ್ತಕದಲ್ಲಿರುವ ಮಾಹಿತಿಯ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಶಿಕ್ಷಣವಲ್ಲ ಎಂದು ಹೇಳಿದರು.ದೈಹಿಕ ಶಿಕ್ಷಣ ಪಡೆಯಲು ಕ್ರೀಡಾ ಚಟುವಟಿಕೆಗಳು ಮಹತ್ತರವಾಗಿವೆ. ವಿಶೇಷವಾಗಿ ನಮ್ಮ ದೇಸೀಯ ಆಟ ಕಬಡ್ಡಿ ಪ್ರೇರಣಾಪೂರ್ಣ ಆಟವಾಗಿದೆ. ಸೋಲು-ಗೆಲುವು ಕ್ರೀಡೆಯ ಅಂಗ. ಸೋಲು, ಗೆಲುವಿಗಿಂಥ ಆಟದಲ್ಲಿ ಉತ್ತಮ ಪ್ರದರ್ಶನ ತೋರುವುದು ಮುಖ್ಯವಾಗಬೇಕು. ಸೋಲು ಇನ್ನೊಂದು ಗೆಲುವಿನ ಅವಕಾಶಕ್ಕೆ ಹಾತೊರೆಯಬೇಕು. ಗೆಲುವು ಮತ್ತಷ್ಟು ಸಾಧನೆಗೆ ಪ್ರೇರಣೆ ಆಗಬೇಕು. ಯಾವುದೇ ಕ್ಷೇತ್ರದಲ್ಲೇ ಆಗಲಿ ಒಂದು ಗೆಲುವು ಅಂತಿಮವಲ್ಲ, ಸತತ ಶ್ರಮ, ಪರಿಶ್ರಮದಿಂದ ಗೆಲುವುಗಳನ್ನು ಪಡೆಯುತ್ತಾ ಹೋಗಬೇಕು ಎಂದು ಶಿವಸಿದ್ಧೇಶ್ವರ ಸ್ವಾಮೀಜಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಸ್ಫೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ್ ಮಾತನಾಡಿ, ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕ್ರೀಡಾಕೂಟ ಆಯೋಜನೆ ವಿಶೇಷ. ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ನವರು ಪ್ರತಿ ವರ್ಷ ಸಿದ್ಧಗಂಗಾ ಮಠದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲು ಹೊರಟಿರುವುದು ಶ್ಲಾಘನೀಯ ವಿಚಾರ. ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ, ಮೂರು ದಿನಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಇದಕ್ಕೆ ಎಲ್ಲಾ ರೀತಿ ಸಹಕಾರ ನೀಡಿದವರಿಗೆ ಅಭಿನಂದನೆಗಳು. ಸಹಸ್ರಾರು ಜನ ಕಬಡ್ಡಿ ಪಂದ್ಯಾವಳಿ ವೀಕ್ಷಣೆ ಮಾಡಿ ರೋಮಾಂಚನಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಮುಖ ಆಟವಾಗಿ ಕಬಡ್ಡಿ ಪ್ರೇರಣೆ ನೀಡಿದೆ ಎಂದು ಹೇಳಿದರು.