ಹುಬ್ಬಳ್ಳಿ:
ಇಲ್ಲಿನ ಶ್ರೀಸಿದ್ಧಾರೂಢ ಸ್ವಾಮಿ ಮಠದ ಕೈಲಾಸ ಮಂಟಪದಲ್ಲಿ ಸದ್ಗುರು ಸಿದ್ಧಾರೂಢರ ರಥೋತ್ಸವ ದಿನವಾದ ಸೋಮವಾರ ಆಯೋಜಿಸಿದ್ದ ವೇದಾಂತ ಪ್ರವಚನದಲ್ಲಿ "ಇಹದೊಳು ಮುಕ್ತನಾಗಿರುತಿರ್ಪನು ಆರೂಢವೆನಿಸುವನವನು " ಎಂಬ ವಿಷಯ ಕುರಿತು ಮಾತನಾಡಿದರು.
ಸಿದ್ಧಾರೂಢರು ಈ ಮಣ್ಣಿನಲ್ಲಿ ಅಡಗಿರುವ ತತ್ವಜ್ಞಾನವನ್ನು ಅರಿತವರು. ಯಾರನ್ನೂ ಸಾಮಾನ್ಯರೆಂದು ಭಾವಿಸದೇ, ಅವರೂ ಕೂಡ ಪರಮಾತ್ಮನ ಅಂಶವೇ ಎಂದು ತಿಳಿದು ಅವರೂ ಕೂಡ ತಮ್ಮ ಸ್ವರೂಪದ ಅರಿವನ್ನು ಪಡೆಯುವ ಶಿಕ್ಷಣ ನೀಡಿದರು ಎಂದರು.ಈ ಜಗತ್ತಿನಲ್ಲಿ ಇಲ್ಲದವರನ್ನು ನಾವು ಆತ್ಮಜ್ಞಾನಿಗಳಾಗಿದ್ದರು ಎಂದು ನೆನಪಿಸಿಕೊಳ್ಳುತ್ತೇವೆ. ಆದರೆ, ಎದುರಿಗೇ ಇರುವ ಹಲವು ಮಹಾತ್ಮರು ಕೂಡ ಆರೂಢರೇ ಆಗಿದ್ದಾರೆ ಎಂಬುದನ್ನು ಮರೆಯುತ್ತೇವೆ. ಕೋಟಿಗಟ್ಟಲೇ ದುಡ್ಡುಗಳಿಸಿ, ಐಷಾರಾಮಿ ಕಾರು ಇಟ್ಟುಕೊಂಡವರೂ ತಾವೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವು ಬಂದಿತು. ಆದರೆ, ಸುಃಖ-ದುಃಖ, ನೋವು- ನಲಿವುಗಳಿಗೆ ತಲೆಕೆಡಿಸಿಕೊಳ್ಳದೇ ಎಂಥ ಪರಿಸ್ಥಿತಿಯಲ್ಲೂ ಸಮಚಿತ್ತವನ್ನು ಕಾಯ್ದುಕೊಂಡು ಕಷ್ಟಗಳಿಗೆ ಹೆದರಲಾರದೇ ಅವುಗಳನ್ನು ಧೈರ್ಯದಿಂದ ಎದುರಿಸುವ ಕಲೆಯನ್ನು ಸಿದ್ಧಾರೂಢರು ಹೇಳಿಕೊಟ್ಟರು ಎಂದು ಹೇಳಿದರು.
ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ರಾತ್ರಿ ಸಿದ್ಧಾರೂಢಮಠದಲ್ಲಿ ಜರುಗಿದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಶಫೀಕ್ ಖಾನ್ ನುಡಿಸಿದ ಸಿತಾರ ವಾದನವು ತನ್ನ ತುಂಬು ಧ್ವನಿಯ ಝೇಂಕಾರದಿಂದ ಇಡೀ ಆವರಣವನ್ನು ತುಂಬಿ ಕಿಕ್ಕಿರಿದು ನೆರೆದ ಸಭಿಕರನ್ನು ಮುದಗೊಳಿಸಿತಲ್ಲದೇ ತಲೆದೂಗುವಂತೆ ಮಾಡಿತು. ಶಫೀಕ್ ಆಲಾಪ, ಜೋಡ, ಝಾಲಾದೊಂದಿಗೆ ರಾಗ ರಾಗೇಶ್ರೀಯನ್ನು ನುಡಿಸಿ, ಉಸ್ತಾದ ರಹಿಮತ್ ಖಾನ್ ಪರಂಪರೆಯ ಗಾಯನ ಭಾವ ಮೀಟುವ ಮನಮೆಚ್ಚುವಂತೆ ಪ್ರಸ್ತುಪಡಿಸಿದರು. ಪ್ರಸಿದ್ಧ ಗಾಯಕಿ ವಿದುಷಿ ಕಲಬುರ್ಗಿಯ ಜಯದೇವಿ ಜಂಗಮಶೆಟ್ಟಿ ತಮ್ಮ ಇಂಪಾದ ಧ್ವನಿಯಲ್ಲಿ ರಾಗ ದುರ್ಗಾದಲ್ಲಿ ದೇವಿ ಭಜೋ ದುರ್ಗಾ ಭವಾನಿ ಗೀತೆ ಹಾಡಿದರು. ಡಾ. ಗೋವಿಂದ ಮಣ್ಣೂರ ರಚಿಸಿದ ಸಿದ್ಧಾರೂಢ ಭಕ್ತಿಗೀತೆ ಪ್ರಸ್ತುತಪಡಿಸಿದರು.
ನೇತ್ರಾವತಿ ಹಿರೇಮಠರಲ್ಲಿ ಕಲಿತ ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಶಿವನ ಮಹಿಮೆ ಸಾರುವ ಕಥೆಗಳನ್ನು ರೂಪಕಗಳಲ್ಲಿ ಪ್ರದರ್ಶಿಸಿದರು. ಗುರುದೇವ ಮಾದನ್ನವರ, ವಕ್ಕುಂದ ಮತ್ತು ಸಂಗಡಿಗರು ಭಕ್ತಿ ಗೀತೆ ಹಾಡಿದರು. ಉಮೇಶ ಪಾಚಂಗೆ ಮತ್ತು ಸಂಗಡಿಗರು ಗೋಂಧಳಿ ಪ್ರದರ್ಶನದಲ್ಲಿ ಸಿದ್ಧಾರೂಢರ ಮಹಾತ್ಮೆಯ ಕಥೆಗಳನ್ನು ನಿರೂಪಿಸಿದರು. ಕೊನೆಗೆ ಅನಿಗೋಳದ ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘದವರಿಂದ ಶ್ರೀಮನ್ನಿಜಗುಣ ಶಿವಯೋಗಿಗಳ ನಾಟಕ ಪ್ರದರ್ಶನ ಗಮನ ಸೆಳೆಯಿತು.