ವಿಜೃಂಭಣೆಯಿಂದ ಜರುಗಿದ ಸಿದ್ಧೇಶ್ವರಸ್ವಾಮಿಯ ಅಟ್ಟುಣ್ಣುವ ಜಾತ್ರೆ

KannadaprabhaNewsNetwork |  
Published : Mar 22, 2026, 01:45 AM IST
21ಕೆಎಂಎನ್ ಡಿ11,12,13,14,15 | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಸಂತೆಕಸಲಗೆರೆ, ಹನಿಯಂಬಾಡಿ, ಕಾರಸವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಮಂಗಲ, ಬೇವಿನಹಳ್ಳಿ, ಹುಲ್ಕೆರೆ ಸೇರಿ ಸುತ್ತಮುತ್ತಲ ಗ್ರಾಮಗಳ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಶ್ರೀ ಭೂಮಿಸಿದ್ಧೇಶ್ವರ ಸ್ವಾಮಿಯ ಒಕ್ಕಲಿನವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಹುತಾತ್ಮ ವೀರ ಮಕ್ಕಳ ಆತ್ಮಕ್ಕೆ ಶಾಂತಿ ಕೋರುವ ಧ್ಯೋತಕವಾಗಿ ನಡೆಯುವ ಶ್ರೀ ಭೂಮಿ ಸಿದ್ಧೇಶ್ವರ ಸ್ವಾಮಿ ಅಟ್ಟುಣ್ಣುವ ಜಾತ್ರೆ ಶನಿವಾರ ವಿಜೃಂಭಣೆಯಿಂದ ನಡೆಯಿತು.

ತಾಲೂಕಿನ ಸಂತೆಕಸಲಗೆರೆ ಗ್ರಾಮದ ಹೊರವಲಯದಲ್ಲಿ ಶ್ರೀ ಭೂಮಿ ಸಿದ್ಧೇಶ್ವರಸ್ವಾಮಿ ದೇವರ ದರ್ಶನ ಪಡೆದ ಸಹಸ್ರಾರು ಮಂದಿ ಭಕ್ತರು ಅಟ್ಟುಣ್ಣುವ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಿದರು. ಅಟ್ಟುಣ್ಣುವ ಜಾತ್ರೆ ಪ್ರಯುಕ್ತ ಶನಿವಾರ ಬೆಳಗ್ಗೆಯೇ ದೇವರಿಗೆ ಹೋಮ, ಹವನ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಪೂಜಾ ವಿಧಿ- ವಿಧಾನಗಳನ್ನು ಅನುಸರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ಸಂತೆಕಸಲಗೆರೆ, ಹನಿಯಂಬಾಡಿ, ಕಾರಸವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಮಂಗಲ, ಬೇವಿನಹಳ್ಳಿ, ಹುಲ್ಕೆರೆ ಸೇರಿ ಸುತ್ತಮುತ್ತಲ ಗ್ರಾಮಗಳ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಶ್ರೀ ಭೂಮಿಸಿದ್ಧೇಶ್ವರ ಸ್ವಾಮಿಯ ಒಕ್ಕಲಿನವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಶುಕ್ರವಾರ ಸಂಜೆಯೇ ಬಾಯಿ ಬೀಗ ಆಚರಣೆ ನಡೆಯಿತು. ಶನಿವಾರ ಬೆಳಗ್ಗೆ 7.30ರಿಂದ ದೇವಾಲಯ ಆವರಣದಲ್ಲಿ ಸಾವಿರಾರು ಜನರು ಸೇರಿ ದೇವರ ದರ್ಶನ ಪಡೆದರು. ಬಳಿಕ ಭಕ್ತರು ಪಾನಕ, ಮಜ್ಜಿಗೆ ಹಾಗೂ ರಸಾಯನ ವಿತರಣೆ ಮಾಡಿ ಸಂಭ್ರಮಿಸಿದರು.

ಜಾತ್ರೆಗೆ ಬಂದ ಮಹಿಳೆಯರು ಅಡುಗೆ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ತಂದು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಹೊರ ಆವರಣಕ್ಕೆ ತೆರಳಿ ಅಡುಗೆ ಮಾಡಿದರು. ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ತಯಾರಿಸಿ ಬಂಧು-ಮಿತ್ರರು, ನೆಂಟರು, ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸಿದರು.

ಉಂಡ ಎಲೆಗಳನ್ನು ಅಲ್ಲೇ ಬಿಡುವುದು:

ಈ ಜಾತ್ರೆಯಲ್ಲಿ ಮಾಂಸಾಹಾರವನ್ನು ದೇವರಿಗೆ ಅರ್ಪಿಸುವುದಿಲ್ಲ. ದೇವಾಲಯದ ಹೊರ ಆವರಣದಲ್ಲಿ ಮಾಂಸಾಹಾರ ತಯಾರಿಸಲಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಿ ತಂದ ತೀರ್ಥವನ್ನು ಪ್ರೋಕ್ಷಣೆ ಮಾಡಿ ಊಟ ಬಡಿಸುವ ಮೂಲಕ ಸಂಪ್ರದಾಯ ಆಚರಣೆ ಮಾಡಿದರು. ಜಾತ್ರೆಗೆ ಬಂದ ಸಹಸ್ರಾರು ಸಂಖ್ಯೆಯ ಜನರು ಮಾಂಸಾಹಾರ ಸೇವಿಸಿದರು. ಊಟ ಮಾಡಿದ ನಂತರ ಎಲೆಗಳನ್ನು ತೆರವುಗೊಳಿಸದೆ ಉಂಡ ಸ್ಥಳದಲ್ಲಿಯೇ ಬಿಡುವುದು ಆಚರಣೆಯಾಗಿದೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ಜಾತ್ರೆ ಸಂಪನ್ನಗೊಂಡಿತು.

ರಾತ್ರಿ ಯಾರೊಬ್ಬರೂ ಸುಳಿಯುವುದಿಲ್ಲ:

ಈ ಜಾತ್ರೆಯ ವಿಶೇಷವೆಂದರೆ ಜಾತ್ರೆ ಮುಗಿದ ಬಳಿಕ ರಾತ್ರಿ ವೇಳೆ ದೇವರ ಸನ್ನಿಧಿ ಅಂಗಳದಲ್ಲಿ ಯಾರೊಬ್ಬರೂ ಸುಳಿಯುವುದಿಲ್ಲ. ಬೆಳಗ್ಗೆ ವೇಳೆಗೆ ಜನರು ಉಂಡ ಎಲೆಗಳು ಒಂದೆಡೆ ಸೇರಿರುತ್ತವೆ ಎಂಬ ಪ್ರತೀತಿ ಇದೆ. ಪ್ರತಿ ಗುರುವಾರ ಮತ್ತು ಭಾನುವಾರ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಮಕ್ಕಳಿಲ್ಲದವರು, ಮದುವೆಯಾಗದವರು ಸೇವೆ ಮಾಡುವ ಮೂಲಕ ದೇವರಿಗೆ ಹರಕೆ ತೀರಿಸುವರು.

ರಾಜಗೋಪುರ ನಿರ್ಮಾಣ ನೆರವಿಗೆ ಮನವಿ:

ಶ್ರೀ ಭೂಮಿ ಸಿದ್ಧೇಶ್ವರಸ್ವಾಮಿ ಟ್ರಸ್ಟ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಟ್ರಸ್ಟ್ ಅಧ್ಯಕ್ಷ ಕೆ. ಸಿದ್ದರಾಮು ಮಾತನಾಡಿ, ದೇವಾಲಯದ ರಾಜಗೋಪುರ ನಿರ್ಮಾಣದ ಕಾರ್‍ಯ ಕೈಗೆತ್ತಿಕೊಂಡಿದ್ದು, ಭಕ್ತಾದಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡಿದರು.

ಟ್ರಸ್ಟ್‌ನ ಕಾರ್ಯದರ್ಶಿ ಚನ್ನಸಿದ್ದೇಗೌಡ, ಉಪಾಧ್ಯಕ್ಷ ಎಸ್.ಕೆಂಪೇಗೌಡ, ಖಜಾಂಚಿ ಟಿ.ಕೆ.ಜಗದೀಶ್, ಜಂಟಿ ಕಾರ್‍ಯದರ್ಶಿ ಬಸವರಾಜು, ಟ್ರಸ್ಟಿಗಳಾದ ಚೇತನ್‌ಕುಮಾರ್, ಶಿವರಾಜು, ಕೆಂಪೇಗೌಡ, ಮಾಜಿ ಕಾರ್ಯದರ್ಶಿ ಕೆ.ಸಿ.ಶ್ರೀನಿವಾಸ್, ಸಂತೆಕಸಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಸೇರಿ ಹಲವರು ಸ್ಥಳದಲ್ಲಿ ಹಾಜರಿದ್ದು ಜಾತ್ರೆಯ ವ್ಯವಸ್ಥೆಗಳು ಸುಗಮವಾಗಿ ನಡೆಯುವುದಕ್ಕೆ ನೆರವಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇನಲ್ಲಿ ನಮ್ಮ ಮೆಟ್ರೋ ಗುಲಾಬಿಮಾರ್ಗ ಲೋಕಾರ್ಪಣೆ ಸಾಧ್ಯತೆ
ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ