ಕನ್ನಡಪ್ರಭ ವಾರ್ತೆ ಪಾಂಡವಪುರಡಾ.ಶಿವಕುಮಾರ ಶ್ರೀಗಳು ಭಕ್ತರ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ಒದಗಿಸಿದ್ದಾರೆ ಎಂದು ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘವು ಡಾ.ಶಿವಕುಮಾರ ಮಹಾಸ್ವಾಮಿಗಳ 5ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಅನ್ನ ದಾಸೋಹದಲ್ಲಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಶಿವಕುಮಾರ ಶ್ರೀಗಳು ಈ ಹಿಂದೆ ಪಾಂಡವಪುರ ತಾಲೂಕಿನ ಚಾಗಶೆಟ್ಟಹಳ್ಳಿ, ಚಿಕ್ಕಯಾರಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಆಗಮಿಸಿ ಭಿಕ್ಷಾಟನೆ ಮಾಡುತ್ತಿದ್ದರು. ಜಿಲ್ಲೆಯ ಜನತೆ ಸ್ವಾಮೀಜಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದರು.
ಭಾರತ ರತ್ನಕ್ಕೆ ಆಗ್ರಹ:ಡಾ.ಶಿವಕುಮಾರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆ, ಜನಪರ ಕಾಳಜಿ, ಶಿಕ್ಷಣ ಕ್ಷೇತ್ರದ ಕಾಂತ್ರಿ, ತ್ರಿವಿಧ ದಾಸೋಹದಂತಹ ಹಲವು ಸಾಮಾಜಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಭಾರತ ರತ್ನಕ್ಕೆ ಆಗ್ರಹಿಸಬೇಕು ಎಂದು ವೀರಶೈವ ಮುಖಂಡರು ಪಕ್ಷಾತೀತಾವಾಗಿ ಆಗ್ರಹಿಸಿದರು.
ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ್ ಬಾಬು, ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಸಿದ್ಧಗಂಗಾ ಮಠದ ಹಳೇಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ರಾಜ್ಯ ನಿರ್ದೇಶಕ ಶಿವಕುಮಾರ್, ತಾಲೂಕು ಅಧ್ಯಕ್ಷ ಆನುವಾಳು ವಿಶ್ವನಾಥ್ ಸ್ವಾಮೀಜಿ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ವೀರಶೈವ ಮುಖಂಡರಾದ ಅಮೃತಿ ರಾಜಶೇಖರ್, ಮಂಡಿಬೆಟ್ಟಹಳ್ಳಿ ಜಗದೀಶ್, ಆಗನಹಳ್ಳಿ ಜಗದೀಶ್, ಕೆ.ಎಲ್.ಆನಂದ್, ತಾಳಶಾನ ಬಸಂತ್, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಇತರರು ಇದ್ದರು.