ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯಲ್ಲಿ ಸತತ 2ನೇ ದಿನವೂ ಸಿದ್ದರಾಮಯ್ಯ ಬೃಹತ್ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ಮತಯಾಚನೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಪ್ರಸಕ್ತ ಸಾಲಿನಲ್ಲಿ 56,432 ಖಾಲಿ ಹುದ್ದೆಗಳ ನೇಮಕಾತಿ ಮಾಡಲಿದ್ದೇವೆ. ಬಳಿಕ, ಹಂತ, ಹಂತವಾಗಿ ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.ಸಿದ್ದು ಭರ್ಜರಿ ರೋಡ್ ಶೋ:
ದಾವಣಗೆರೆಯಲ್ಲಿ 2ನೇ ದಿನವೂ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಕೈಗೊಂಡ ಸಿಎಂ, ಆರ್‌ಎಂಸಿ ಲಿಂಕ್ ರಸ್ತೆ, ವೀರ ಮದಕರಿ ನಾಯಕ ವೃತ್ತ, ಹಗೇದಿಬ್ಬ ಸರ್ಕಲ್ ಸೇರಿದಂತೆ ನಗರದ ಹಳೆ ಭಾಗದಲ್ಲಿ ಬುಧವಾರ ಬೃಹತ್ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಚಿವ ಈಶ್ವರ ಖಂಡ್ರೆ ಅವರಿಗೆ ಸಾಥ್ ನೀಡಿದರು.ಇದಕ್ಕೂ ಮೊದಲು ನಗರದ ವಿವಿಧ ದೇವಾಲಯ, ದರ್ಗಾಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಮೊದಲು ನಗರ ದೇವತೆ ದುರ್ಗಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ನಂತರ ಸಮೀಪದಲ್ಲಿರುವ ಪುರಾತನ ಕಾಲದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ನಂತರ, ಶಿವಾಜಿ ನಗರದಲ್ಲಿರುವ ಹಜರತ್ ಖಡಕ್ ಶಾ ವಲಿ ದರ್ಗಾಗೆ ಭೇಟಿ ನೀಡಿ, ಚಾದರ್ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು.