- 40 ಹಳ್ಳಿಗಳ 2 ಸಾವಿರ ರೈತರು ಭಾಗಿ: ಪೂರ್ವಭಾವಿ ಸಭೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸುಮಾರು 74 ಕೆರೆಗೆಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ಜುಲೈ 27ರಂದು ಬೆಳಗ್ಗೆ 11.30 ಗಂಟೆಗೆ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದರು.ಶುಕ್ರವಾರ ಮುತ್ತಿಗೆ ಹಾಕುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು 40 ಹಳ್ಳಿಗಳ 2 ಸಾವಿರ ರೈತರು ಮುತ್ತಿಗೆ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿ ಉಪವಿಭಾಗಾಧಿಕಾರಿ (ಎಸಿ) ಕಚೇರಿಗೆ ಬರಲಿದೆ. ಅಲ್ಲಿ ಸಭೆ ನಡೆಸಿ, ಮುತ್ತಿಗೆ ಹಾಕಲಾಗುವುದು ಎಂದರು.
ಈ ವರ್ಷದಲ್ಲಿ ಮುಂಗಾರು ಮಳೆ ಕುಂಠಿತವಾಗಿದೆ. ದನಕರುಗಳಿಗೆ ಕುಡಿಯಲು ನೀರು ಲಭ್ಯವಿಲ್ಲ. ಎಲ್ಲ ಕೆರೆ-ಕಟ್ಟೆಗಳು, ಬೋರ್‌ವೆಲ್‌ಗಳು ಬತ್ತಿಹೋಗಿವೆ. ಬಿತ್ತಿರುವ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ. ಈ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಬೆಳೆಸಾಲ ಮನ್ನಾ ಸೇರಿದಂತೆ ಪ್ರತಿ ಎಕರೆಗೆ ಎನ್‌ಡಿಆರ್‌ಎಫ್ ಪರಿಹಾರ ಮಾನದಂಡದಡಿ ₹40 ಸಾವಿರ ಪರಿಹಾರ ಕೊಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಬರ ಸಂಕಷ್ಟವಿರುವ ಕಾರಣ ರಾಷ್ಠ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕುಗಳು ಬೆಳೆ ಸಾಲ ಮನ್ನಾ ಮಾಡಬೇಕು. ಪಕ್ಕದ ತಮಿಳುನಾಡು, ಮಹಾರಾಷ್ಠ್ರ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಇದೇ ರೀತಿ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡಬೇಕು. ರೈತರು ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಚಿನ್ನದ ಒಡವೆಗಳನ್ನು ಬ್ಯಾಂಕುಗಳಲ್ಲಿಟ್ಟು ಗಿರಿವಿ ಸಾಲ ಪಡೆದಿದ್ದಾರೆ. ಬರಗಾಲದ ಕಾರಣ ಅವರಿಗೆ ಬಡ್ಡಿ, ಮತ್ತು ಸಾಲ ಪಾವತಿ ಮಾಡಿ ಸಾಲ ನವೀಕರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಡ್ಡಿ ಕಟ್ಟಿಸಿಕೊಂಡು ರೈತರ ಸಾಲ ನವೀಕರಣ ಮಾಡಿಕೊಡುವಂತೆ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಕೂಡಲೇ ಆದೇಶ ಹೊರಡಿಸಬೇಕು ಎಂದರು.
- - -
- ಎಂ.ಪಿ.ಕರಿಬಸಪ್ಪ ಗೌಡ, ರಾಜ್ಯಾಧ್ಯಕ್ಷ.
-24ಎಚ್.ಎಲ್.ಐ2: