ಶಿಶು ಮರಣ ತಡೆಗೆ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ: ಡಾ.ಸಿದ್ದನಗೌಡ

KannadaprabhaNewsNetwork |  
Published : Aug 05, 2024, 12:36 AM IST
ಪೊಟೋ: 2ಎಸ್ಎಂಜಿಕೆಪಿ05ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್,ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧಾನ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ತಿಳಿಸಿದರು.

ನಗರದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಶಿಶು ಆರೈಕೆ ಬಗ್ಗೆ ಸುಸಜ್ಜಿತ ವ್ಯವಸ್ಥೆ ಮತ್ತು ತಜ್ಞ ವೈದ್ಯರುಗಳಿಂದ ಸೇವೆ ಒದಗಿಸಲಾಗುತ್ತಿದೆ. ಇತ್ತೀಚಿನ ಶಿಶು ಮರಣದ ಅಂಕಿ-ಅಂಶ ಪರಿಗಣಿಸಿದಾಗ ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಿಂದಿನ ವರ್ಷಗಳಲ್ಲಿ 20ರಿಂದ 25 ಇದ್ದ ಶಿಶು ಮರಣ ಪ್ರಮಾಣ ಇಂದು 6ರಿಂದ 7ಕ್ಕೆ ತರಲಾಗಿದೆ. ಇದಕ್ಕೆ ಕಾರಣ ತಜ್ಞ ವೈದ್ಯರು ಮತ್ತು ಎಲ್ಲಾ ಸಿಬ್ಬಂದಿ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಎದೆಹಾಲು ಸಂಗ್ರಹಣ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ತಾಯಂದಿರೇ ಹಾಲಿನ ದಾನಿಗಳಾಗಿರುತ್ತಾರೆ. ಇಲ್ಲಿಯವರೆಗೆ ಒಟ್ಟು ೫೬ ಲೀಟರ್ ತಾಯಿ ಹಾಲು ಸಂಗ್ರಹಣೆಯಾಗಿದೆ. ೩೮ ಲೀಟರ್‌ನಷ್ಟು ಎದೆಹಾಲನ್ನು ಮಕ್ಕಳಿಗೆ ನೀಡಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಮಾತ್ರ ಮಿಲ್ಕ್ ಬ್ಯಾಂಕ್ ವ್ಯವಸ್ಥೆ ಇರುತ್ತದೆ. ಇದು ಕೂಡ ಶಿಶುಮರಣ ತಡೆಗೆ ಬಹಳ ಪ್ರಮುಖವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತಾಯಂದಿರಲ್ಲಿ ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿದ್ದರೆ ಅಂತವರು ಎದೆ ಹಾಲನ್ನು ಮಿಲ್ಕ್ ಬ್ಯಾಂಕ್‌ಗೆ ದಾನ ಮಾಡುವಂತೆ ಕರೆ ನೀಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್, ಪ್ರತಿ ವರ್ಷ ಆ.1ರಿಂದ 7ರ ವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ. ಎದೆ ಹಾಲಿನ ಮಹತ್ವ ಹಾಗೂ ಹಾಲುಣಿಸುವ ವಿಧಾನ ಮತ್ತು ಶಿಶುವಿಗೆ ನೀಡಬೇಕಾದ ಪೂರಕ ಆಹಾರ ನೀಡುವ ಕ್ರಮದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಾಯಂದಿರು ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆ ಹಾಲು ನೀಡಲು ಪ್ರಾರಂಭಿಸಿ ಆರು ತಿಂಗಳವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ಬೇರೆ ಯಾವುದೇ ಆಹಾರ ನೀಡಬಾರದು ಎಂದು ತಿಳಿಸಿದರು.

ಮಕ್ಕಳ ತಜ್ಞರಾದ ಡಾ.ಸುನೀತಾ ಮಾತನಾಡಿ, ತಾಯಿ ಹಾಲು ಮಕ್ಕಳ ಬೌದ್ಧಿಕ, ಶಾರೀರಿಕ ಬೆಳವಣಿಗೆಗೆ ಬಹಳ ಮುಖ್ಯವಾಗಿದ್ದು, ಎದೆ ಹಾಲು ಕುಡಿಯುವ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಸದೃಢ ಮತ್ತು ಆರೋಗ್ಯವಂತರಾಗಿರುತ್ತಾರೆ. ತಾಯಿ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯ ಸುದಾರಿಸುತ್ತೇ ಎಂದು ತಿಳಿಸಿ ಎಲ್ಲರಿಗೂ ತಪ್ಪದೇ ಎದೆಹಾಲುಣಿಸುವಂತೆ ಮಾಹಿತಿ ನೀಡಿದರು.

ಒ.ಬಿ.ಜಿ ವಿಭಾಗದ ಮುಖ್ಯಸ್ಥ ಡಾ.ಲೇಪಾಕ್ಷಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಆರ್.ಬಿ.ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಮಿಲ್ಕ್ ಬ್ಯಾಂಕ್ ವಿಭಾಗದ ಡಾ.ವಂಸತ್ , ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಮಾತನಾಡಿದರು. ಶಶ್ರೂಷಕ ಅಧೀಕ್ಷಕಿ ಅನ್ನಪೂರ್ಣ,ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ದಂತ ನೋಡಲ್ ಅಧಿಕಾರಿ ಡಾ.ಮೋಹನ್, ಒ.ಬಿ.ಜಿ ಮತ್ತು ಮಕ್ಕಳ ವಿಭಾಗದ ತಜ್ಞ ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ