ಮದ್ಯ ಮಾರಾಟ ತಡೆಗೆ ಒತ್ತಾಯ, ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೌನ ಪ್ರತಿಭಟನೆ

KannadaprabhaNewsNetwork |  
Published : Apr 07, 2026, 02:15 AM IST
ಯಲಬುರ್ಗಾ ತಾಲೂಕಿನ ಜಿ. ಜರಕುಂಟಿಯಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಮುಖಂಡರು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದ ದೇವಸ್ಥಾನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಜಿ. ಜರಕುಂಟಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು, ನೂರಾರು ಮಹಿಳೆಯರು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಯಲಬುರ್ಗಾ: ತಾಲೂಕಿನ ಜಿ. ಜರಕುಂಟಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು, ನೂರಾರು ಮಹಿಳೆಯರು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಗ್ರಾಮದ ಸಣ್ಣಸಣ್ಣ ಅಂಗಡಿಗಳಲ್ಲೂ ಯಾರ ಭಯವೂ ಇಲ್ಲದೇ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮದ ಬಹುತೇಕರು ಮದ್ಯದ ಚಟಕ್ಕೆ ಅಂಟಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಬಗ್ಗೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷದಿಂದಲೇ ಮದ್ಯ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಜಾಲ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ಸ್ವಾಮೀಜಿಗಳ ಮುಂದೆ ತೋಡಿಕೊಂಡರು. ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆದರೆ ತಾಲೂಕು ಆಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಪ್ರತಿಜ್ಞೆ: ಕೆಲವು ಮದ್ಯವ್ಯಸನಿಗಳು ಹಾಗೂ ಮದ್ಯ ಮಾರಾಟಗಾರರು ಸ್ವಾಮೀಜಿಗಳ ಪಾದ ಮುಟ್ಟಿ ಇನ್ನು ಕುಡಿಯುವುದಾಗಲಿ, ಮಾರುವುದಾಗಲಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಇನ್ನು ಕೆಲವರು ಪ್ರತಿಜ್ಞೆ ಮಾಡದೇ ಪಲಾಯನ ಮಾಡಿದರು.

ಗ್ರಾಮಸ್ಥರ ನೋವನ್ನು ಮುಕ್ತವಾಗಿ ಆಲಿಸಿದ ಸ್ವಾಮೀಜಿ, ಯುವಕರು ಮದ್ಯ ಸೇವನೆ ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. ಮದ್ಯ ಸೇವನೆಯಿಂದಾಗುವ ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗ್ರಾಮದ ಯುವಕರಿಗೆ ಮನವರಿಕೆ ಮಾಡಿದರು.

ಗ್ರಾಮದ ಮುಖಂಡರಾದ ಭೀಮನಗೌಡ, ಮಲ್ಲನಗೌಡ, ದೇವಮ್ಮ, ಭರಮಮ್ಮ, ಶಿವಮ್ಮ, ಶಿವನಗೌಡ, ಲಕ್ಷ್ಮವ್ವನಿಂಗಪ್ಪ ಹಳ್ಳಿಕೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ