ಭರಪೂರ ಅನುದಾನ ಬಂದರೂ ಕುಕನೂರಿನಲ್ಲಿ ತಪ್ಪದ ನೀರಿನ ತಾಪತ್ರಯ

KannadaprabhaNewsNetwork |  
Published : Apr 07, 2026, 02:15 AM IST
ಕುಡಿಯಲು ಕೆರೆಯಿಂದ ನೀರು ತರುತ್ತಿರುವ ಜನರು | Kannada Prabha

ಸಾರಾಂಶ

ಕುಡಿಯುವ ನೀರಿಗಾಗಿ ಕೋಟ್ಯಂತರ ರೂ. ಅನುದಾನ ಬರುತ್ತಿದ್ದರೂ, ಕುಕನೂರು ತಾಲೂಕಿನಲ್ಲಿ ಜನರಿಗೆ ಮಾತ್ರ ಅದೇ ಕೆರೆ, ಬಾವಿ, ಬೋರ್‌ವೆಲ್‌ ನೀರೇ ಗತಿ! ಕುಡಿಯುವ ನೀರಿನ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಅನುದಾನದ ಬರುತ್ತಿದ್ದರೂ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಕುಡಿಯುವ ನೀರಿಗಾಗಿ ಕೋಟ್ಯಂತರ ರೂ. ಅನುದಾನ ಬರುತ್ತಿದ್ದರೂ, ಜನರಿಗೆ ಮಾತ್ರ ಅದೇ ಕೆರೆ, ಬಾವಿ, ಬೋರ್‌ವೆಲ್‌ ನೀರೇ ಗತಿ!

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ತಾಲೂಕಿಗೆ ೨೦೧೬-೧೭ನೇ ಸಾಲಿನಲ್ಲಿ ಸಿಎಂ ಆರ್ಥಿಕ ಸಲಹೆಗಾರ- ಶಾಸಕ ಬಸವರಾಜ ರಾಯರಡ್ಡಿ ಅವರು ₹೭೬೩ ಕೋಟಿ ಅನುದಾನ ಒದಗಿಸಿದ್ದಾರೆ. ೨೦೧೮ರಿಂದ ಕುಡಿಯುವ ನೀರಿಗಾಗಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಅನುದಾನ ತಂದಿದ್ದಾರೆ. ಅಂತರ್ಜಲ ವೃದ್ಧಿಗಾಗಿ ಕೆರೆಗಳ ಜೀರ್ಣೋದ್ಧಾರ, ಚೆಕ್ ಡ್ಯಾಂ ನಿರ್ಮಿಸುವ ಜತೆಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಿದ್ದರೂ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಲೇ ಇದೆ.ಕೆರೆಗೆ ಬಜೆಟ್‌ನಲ್ಲಿ ಹಣ: ೨೦೨೪ರಲ್ಲಿ ಶಾಸಕ ರಾಯರಡ್ಡಿ ಅವರು ಕುಡಿಯುವ ನೀರು ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕೆ ಯಲಬುರ್ಗಾ ಮತ್ತು ಕುಕನೂರಿಗೆ ತಾಲೂಕಿನಲ್ಲಿ 30 ಕೆರೆ ತುಂಬಿಸಲು ₹೨೭೨ ಕೋಟಿ ಮಂಜೂರು ಮಾಡಿಸಿದ್ದಾರೆ.

ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ೧೪೪ ಗ್ರಾಮಗಳು, ಕುಕನೂರಿನ ೫೬ ಹಳ್ಳಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಬರುತ್ತವೆ. ಆದರೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿವೆ. ಆದರೆ ನೀರು ಹರಿದಿಲ್ಲ. ಅದರಿಂದಾಗಿ ಜೀವಜಲಕ್ಕಾಗಿ ಜನರು ಹಪಹಪಿಸುತ್ತಿದ್ದಾರೆ. ಆರ್‌ಒ ಪ್ಲಾಂಟ್‌ಗಳಲ್ಲಿ ಬೆಳೆದ ಜಾಲಿ ಮುಳ್ಳು: ಗ್ರಾಮೀಣ ಪ್ರದೇಶದ ಜನರಿಗಾಗಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದ್ದು, ಗ್ರಾಪಂ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಕೆಲವು ಗ್ರಾಮದಲ್ಲಿ ಆರ್‌ಒ ಪ್ಲಾಂಟ್‌ಗಳಲ್ಲಿ ಜಾಲಿ ಮುಳ್ಳು ಬೆಳೆದು ಮುಚ್ಚಿ ಹೋಗಿವೆ. ಸರ್ಕಾರದ ಯೋಜನೆ ಮುಳ್ಳಿನಲ್ಲಿ ಮುಚ್ಚಿದಂತಾಗಿದೆ. ಅಮೃತ್ ಯೋಜನೆ ೨.೦: ಕುಕನೂರು ಪಟ್ಟಣದ ೧೯ ವಾರ್ಡ್‌ಗಳ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯ ಅನುದಾನದಡಿ ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು ಮತ್ತು ಯಲಬುರ್ಗಾ ಪಟ್ಟಣಗಳಿಗೆ ಹಾಗೂ ಮಾರ್ಗದ ಮಧ್ಯದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ತಳಕಲ್, ತಳಬಾಳ, ಭಾನಾಪುರ ಗ್ರಾಮಗಳು ಮತ್ತು ಟಾಯ್ ಕ್ಲಸ್ಟರ್ ಇಂಡಸ್ಟ್ರಿಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆ ಕಾಮಗಾರಿ ಆರಂಭವಾಗಿದೆ. ಬಜೆಟ್‌ನಲ್ಲಿ ನೀರಿಗಾಗಿ ಅನುದಾನ: ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮ ಸೇರಿದಂತೆ ೨೩ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ₹೧೨೫ ಕೋಟಿ ಅನುದಾನ ನೀಡಿದ್ದಾರೆ. ಬನ್ನಿಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ಕುಡಿಯುವ ನೀರಿನ ಸರಬರಾಜಿನ ಪಂಪ್‌ಸೆಟ್‌ ಕೆಟ್ಟು ನಿಂತರೆ ಆ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಇದನ್ನು ಅರಿತ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಬಜೆಟ್‌ನಲ್ಲಿ ಅನುದಾನ ನೀಡಿದ್ದಾರೆ. ಪೈಪ್‌ಲೈನ್‌ ಅಳವಡಿಕೆ ಅಧ್ವಾನ: ಪಟ್ಟಣದಲ್ಲಿ ಕೋಟ್ಯಂತರ ರು. ಅನುದಾನದಿಂದ ನಿರ್ಮಿಸಲಾಗಿದ್ದ ಸಿಸಿ ರಸ್ತೆಯನ್ನು ಅಮೃತ ೨.೦ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗೆ ಮನಬಂದಂತೆ ಒಡೆದು ಹಾಕಲಾಗಿದೆ. ಈ ಬಗ್ಗೆ ಪ.ಪಂ.ನಲ್ಲಿ ಸದಸ್ಯರು ಎಸ್ಟಿಮೆಟ್ ಕೇಳಿದರೆ ನಮಗೂ ಮಾಹಿತಿ ನೀಡಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ. ಈ ರಸ್ತೆಯಲ್ಲಿ ಸಂಚಾರ ಜನರಿಗೆ ದುಸ್ತರವಾಗಿದೆ. ಕೆರೆಯ ನೀರೇ ಆಸರೆ: ತಾಲೂಕಿನ ಭಟಪನಹಳ್ಳಿ, ಚಿಕೇನಕೊಪ್ಪ, ಬಿನ್ನಾಳ, ಯರೇಹಂಚಿನಾಳ, ಸೋಂಪುರ, ಮಾಳೇಕೊಪ್ಪ, ಬನ್ನಿಕೊಪ್ಪ ಸೇರಿ ಇತರ ಕೆಲವು ಗ್ರಾಮದಲ್ಲಿ ಕೆರೆಯ ನೀರೇ ಜೀವನಾಧಾರವಾಗಿದ್ದು, ಬಹುತೇಕ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನಿಂದ ದೂರ ಉಳಿದಿವೆ.ಬೇಸಿಗೆಗೆ ಸಂಕಷ್ಟ: ಹಳ್ಳಿಗಳಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಬಿಟ್ಟರೆ, ಇನ್ನೂ ಕೆಲವೊಂದು ವಾರ್ಡ್‌ಗಳಲ್ಲಿ ೬ರಿಂದ ೮ ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲೂಕಿನ ಕೆಲವು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಸರಿಯಾದ ಸಮಯಕ್ಕೆ ನೀರು ಪೂರೈಕೆ ಇಲ್ಲದೆ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಕುಕನೂರು ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಟ್ಯಾಂಕರ್‌ ಮೂಲಕ ಸರಬರಾಜು: ನೂತನ ಕುಕನೂರು ತಾಲೂಕಿನಲ್ಲಿ 15 ಗ್ರಾಪಂಗಳಿದ್ದು, 53 ಗ್ರಾಮಗಳಿವೆ. ಬಹುತೇಕ ಗ್ರಾಮಗಳಿಗೆ ನೀರಿನ ಸಮಸ್ಯೆ ಇಲ್ಲದಿದ್ದರೂ ಮಂಗಳೂರು, ಬನ್ನಿಕೊಪ್ಪ, ಮಾಳೆಕೊಪ್ಪ, ಯರೇಹಂಚಿನಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬೇಸಿಗೆ ವೇಳೆ ಆಗುತ್ತದೆ. ಇಲ್ಲಿ ಅವಶ್ಯಕ ವೇಳೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.ಕಾಳಜಿ ಆವಶ್ಯ: ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಬೇಸಿಗೆ ವೇಳೆ ಇದ್ದೆ ಇರುತ್ತದೆ. ಮೋಟಾರ್ ರಿಪೇರಿ, ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. . ಯೋಜನೆಗಳು ತರುವುದು ಮಾತ್ರವಲ್ಲ, ಅವುಗಳು ಕಾರ್ಯರೂಪಕ್ಕೆ ಬರಲು ಸಹ ಕಾಳಜಿ ಅವಶ್ಯ ಎಂದು ಮಂಡ್ಲಿಗೇರಿ ಗ್ರಾಮದ ಶಿವಲೀಲಾ ದಳವಾಯಿ ಹೇಳುತ್ತಾರೆ.ಕ್ರಮ ಕೈಗೊಳ್ಳುತ್ತೇವೆ: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಭೆ ಮಾಡಲಾಗಿದೆ. ೩ ವರ್ಷದಲ್ಲಿ ಕುಡಿಯುವ ನೀರಿಗೆ ಏನೇನು ಕೆಲಸಗಳಾಗಿವೆ ಎನ್ನುವ ಮಾಹಿತಿ ಪಡೆಯಲಾಗಿದೆ. ಸದ್ಯಕ್ಕೆ ಕುಡಿಯುವ ನೀರನ ಸಮಸ್ಯೆ ಇಲ್ಲ. ಬನ್ನಿಕೊಪ್ಪ, ಇಟಗಿ ಮತ್ತು ಯರೇಹಂಚಿನಾಳ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕುಕನೂರು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ