ಸರಳ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ನವ ಜೋಡಿಗಳು..!

KannadaprabhaNewsNetwork | Published : Mar 11, 2025 12:47 AM

ಸಾರಾಂಶ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸರಳ ಸಾಮೂಹಿಕ ವಿವಾಹದಲ್ಲಿ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರೆ, ಮದುವೆಯಾಗಿ 50 ವರ್ಷ ಪೂರೈಸಿದ 260 ವೃದ್ಧ ದಂಪತಿಯನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸರಳ ಸಾಮೂಹಿಕ ವಿವಾಹದಲ್ಲಿ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರೆ, ಮದುವೆಯಾಗಿ 50 ವರ್ಷ ಪೂರೈಸಿದ 260 ವೃದ್ಧ ದಂಪತಿಯನ್ನು ಗೌರವಿಸಲಾಯಿತು.

ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ಮದುವೆಯ ಎಲ್ಲಾ ವಿಧಿವಿಧಾನಗಳು ಬಹಳ ಅಚ್ಚುಕಟ್ಟಾಗಿ ನೆರವೇರಿದವು. ಹೋಮ ಹವನಗಳು, ಪೂಜೆ ಪುನಸ್ಕಾರಗಳು ಜರುಗಿದವು. ಜಾತ್ರಾ ಮಹೋತ್ಸವ ಹಾಗೂ ಸರಳ ವಿವಾಹದ ಹಿನ್ನೆಲೆಯಲ್ಲಿ ಶ್ರೀಮಠ ಸೇರಿದಂತೆ ಬಿಜಿಎಸ್ ಸಭಾಭವನವನ್ನು ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಹೋಮ ಹವನ ಧಾರ್ಮಿಕ ಸಂಪ್ರದಾಯಗಳಲ್ಲಿ ಭಾಗವಹಿಸಿದರು. ಪೂರ್ಣಾಹುತಿ ಅರ್ಪಿಸುವ ಮೂಲಕ ಮದುವೆ ವಿಧಿವಿಧಾನಗಳನ್ನು ಪೂರೈಸಿದ ನಂತರ ವಧುವರರಿಗೆ ಮಂತ್ರಾಕ್ಷತೆ ಹಾಕಿ ಫಲ ತಾಂಬೂಲ ನೀಡಿ ಹರಸಿದರು. ಹೆಣ್ಣಿಗೆ ಸೀರೆ, ರವಿಕೆ, ತಾಳಿ, ಕಾಲುಂಗುರ ಮುತೈದೆಯರಿಗೆ ಸಲ್ಲುವ ಬಾಗಿನ ನೀಡಲಾಯಿತು. ಗಂಡಿಗೆ ಪೇಟ, ಪಂಚೆ, ಶರ್ಟ್ ನೀಡಲಾಯಿತು.

ದಿವ್ಯ ಸಾನಿಧ್ಯ ವಹಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮಾತನಾಡಿ, ಗೃಹಸ್ಥಾಶ್ರಮ ಬಹಳ ಗಟ್ಟಿಯಾಗಿರುವ ನೆಲದಲ್ಲಿ ಮಾತ್ರ ಸಂಸ್ಕಾರ, ಸಂಸ್ಕೃತಿಯೂ ಕೂಡಭದ್ರವಾಗಿರುತ್ತದೆ ಎಂದರು.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನೂತನ ವಧು ವರರು ತಮಗೆ ಎದುರಾಗುವ ಯಾವುದೇ ಕಷ್ಟಗಳನ್ನು ಸಹಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಚಿಂತಿಸಿ ಅದರಿಂದ ಬರುವ ಶಕ್ತಿಯಿಂದ ಉತ್ತಮ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಶ್ರೀಕ್ಷೇತ್ರದಲ್ಲಿ ವರ್ಷವಿಡೀ ಸರಳ ವಿವಾಹ ಮಹೋತ್ಸವ ನಡೆಯುತ್ತಿದ್ದರೂ ಭೈರವೈಕ್ಯಶ್ರೀಗಳ ಸಂಕಲ್ಪದಂತೆ ಜಾತ್ರಾ ಮಹೋತ್ಸವದಲ್ಲಿ ಉಚಿತವಾಗಿ ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ. ಅಕ್ಕಿ ಅರಿಸಿನ ಕುಂಕುಮ ಒಂದಾಗಿ ಮಂತ್ರಾಕ್ಷತೆಯಾಗಿರುವಂತೆ ಎಲ್ಲಿದ್ದವರೋ ಇಂದು ಒಂದಾಗಿ ಸಂಗಾತಿಗಳಾಗಿದ್ದೀರಿ. ಜೀವನದಲ್ಲಿ ಎದುರಾಗುವ ಸೋಲಿಗೆ ಭಯಪಡದೆ ಏನೇ ಸಮಸ್ಯೆಗಳು ಬಂದರೂ ಸಹಿಸಿಕೊಂಡು ನಿಮ್ಮೋಳಗಡಗಿರುವ ಶಕ್ತಿಯನ್ನು ಸಂಘಟಿಸಿಕೊಂಡು ಜೀವನವನ್ನು ಸಂತೃಪ್ತಿಯಾಗಿ ಕಳೆಯಬೇಕೆಂದು ನವ ವಧುವರರಿಗೆ ಶುಭ ಹಾರೈಸಿ ಆಶೀರ್ವದಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸರಳ ಸಾಮೂಹಿಕ ವಿವಾಹದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸತಿ ಪತಿಗಳಾದರು. ಮದುವೆಯಾಗಿ 50 ವರ್ಷ ದಾಪಂತ್ಯ ಜೀವನ ನಡೆಸಿದ 260 ಜೋಡಿ ವೃದ್ದ ದಂಪತಿಗಳಿಗೆ ಮೈಸೂರು ಪೇಟ ತೊಡಿಸಿ ಶಾಲುಹೊದಿಸಿ, ಬಾಗಿನ ಮತ್ತು ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಆರ್‌ಎಸ್‌ಎಸ್‌ನ ಜಂಟಿ ಕಾರ್ಯದರ್ಶಿ ಪಟ್ಟಾಭಿರಾಮ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಐಎಎಸ್ ಅಧಿಕಾರಿ ರಂಗಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಸಹಸ್ರಾರು ಮಂದಿ ಭಕ್ತರು ಇದ್ದರು.

Share this article