ಕನ್ನಡಪ್ರಭ ವಾರ್ತೆ ಶಿವಮೊಗ್ಗಮಹಾತ್ಮರ ದಿವ್ಯಸತ್ಸಂಗದಿಂದ ನಮ್ಮ ಪಾಪ ಕರ್ಮಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ರಾಷ್ಟ್ರೀಯ ಬಸವದಳ ಟ್ರಸ್ಟ್ ವತಿಯಿಂದ ವಿನೋಬನಗರ ಕಲ್ಲಳ್ಳಿಯ ಬಸವಮಂಟಪದಲ್ಲಿ ಸೋಮವಾರ ಕೂಡಲ ಸಂಗಮದಲ್ಲಿ ನಡೆದ ಶರಣ ಮೇಳ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣನವರು ಲಿಂಗೈಕ್ಯಗೊಂಡ ಸುಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಶರಣಮೇಳ ಒಂದು ಪವಿತ್ರ ಮೇಳವಾಗಿದ್ದು, ಅದು ನಮ್ಮ ಜನ್ಮಾಂತರಗಳ ಪಾಪಕರ್ಮಗಳನ್ನು ಶುದ್ಧೀಕರಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿ, ಆಧ್ಯಾತ್ಮಪೂರ್ಣ ಸಂದೇಶಗಳನ್ನು ನಮ್ಮ ಯುವಜನಾಂಗಕ್ಕೆ ತಿಳಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಸುಭದ್ರಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಡಾ. ಗಂಗಾದೇವಿ ಮಾತಾಜಿ ಮಾತನಾಡಿ, ಗುರುಬಸವಣ್ಣನವರ ತಪೋಸ್ಥಾನ, ವಿದ್ಯಾಭೂಮಿ ಹಾಗೂ ಲಿಂಗೈಕ್ಯ ಸುಕ್ಷೇತ್ರವಾದ ಕೂಡಲಸಂಗಮದಲ್ಲಿ 37 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ ಶರಣಮೇಳವು ಭಕ್ತಿ ಹಾಗೂ ಜ್ಞಾನವನ್ನು ಪ್ರಧಾನವಾಗಿ ಪ್ರಸರಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.