ಕಾರಟಗಿ: ಜಿಲ್ಲೆಯ ಐತಿಹಾಸಿಕ ಮಹತ್ವದ ಪ್ರದೇಶ ಪರನಾರಿಯ ಸಹೋದರ ಎಂದು ಖ್ಯಾತಿ ಪಡೆದ, ಗಂಡುಗಲಿ ಕುಮಾರರಾಮನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದೊಂದಿಗೆ ಚರ್ಚಿಸಿ, ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಪದ್ಮಶ್ರೀ ಕನ್ವೆನ್ಷನ್ ಹಾಲ್‌ನಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಕಾರಟಗಿ ತಾಲೂಕು ಘಟಕದ ಸಹಯೋಗದಲ್ಲಿ ಸೋಮವಾರ ನಡೆದ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರಟಗಿ ಹಾಗೂ ಕನಕಗಿರಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಜಾಗ ನಿಗದಿಪಡಿಸಲಾಗಿದೆ. 15 ದಿನಗಳೊಳಗಾಗಿ ಎರಡೂ ಕಡೆ, ತಲಾ ₹೨ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹೫,೦೦೦ ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ ಶೇ. ೨೫ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕಾಗಿಯೇ ಮೀಸಲಿಟ್ಟಿದೆ. ನೀವು ಶಿಕ್ಷಣ ಸಂಸ್ಥೆ ಕಟ್ಟಲು ಮುಂದಾದರೆ ಸರ್ಕಾರ ಸವಲತ್ತು ನೀಡುತ್ತದೆ ಎಂದು ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ನಾಯಕ ಸಮುದಾಯದ ಕೊಡುಗೆ ಅನುಪಮವಾದುದು. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ವಕೀಲ ಶಿವರೆಡ್ಡಿ ನಾಯಕ ಹಾಗೂ ನಾಗರಾಜ್ ಬಿಲ್ಗಾರ್ ಪ್ರಾಸ್ತಾವಿಕ ಮಾತನಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳ ಕುರಿತು ಡಾ.ಡಿ.ಕೆ. ಮಾಳೆ ವಿಶೇಷ ಉಪನ್ಯಾಸ ನೀಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅಧಿಕ ಅಂಕ ಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ಪಾಟೀಲ್, ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು, ಉದ್ಯಮಿಗಳಾದ ಪ್ರಹ್ಲಾದ ಶ್ರೇಷ್ಠಿ, ಎನ್. ಶ್ರೀನಿವಾಸ, ಹನುಮೇಶ ನಾಯಕ, ವೀರೇಶ ಸಾಲೋಣಿ, ಭುವನೇಶ್ವರಿ ನಾಯಕ, ಜ್ಯೋತಿ ಬಿಲ್ಗಾರ್, ರೆಡ್ಡಿ ಶ್ರೀನಿವಾಸ, ಚನ್ನಬಸಪ್ಪ ಸುಂಕದ್, ಅಯ್ಯಪ್ಪ ಉಪ್ಪಾರ, ನಾಗನಗೌಡ ಪೊಲೀಸ್‌ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗ್ಯಾನನಗೌಡ ಭಾಗವಹಿಸಿದ್ದರು.
ಹುಲಿಹೈದರ ಸಂಸ್ಥಾನದ ರಾಜಾ ನವೀನಚಂದ್ರ ನಾಯಕ, ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಬೂರಿ ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವರಾಜಕುಮಾರ, ಸೋಮನಾಥ ಹೆಬ್ಬಡದ, ರಮೇಶ ನಾಯಕ ಮತ್ತು ದೇವರಾಜ ನಾಯಕ ಕಾರ್ಯಕ್ರಮ ನಿರ್ವಹಿಸಿದರು.ಭವ್ಯ ಮೆರವಣಿಗೆ: ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೆಳಗ್ಗೆ ೧೦ ಗಂಟೆಗೆ ಇಲ್ಲಿನ ಎಪಿಎಂಸಿ ಆವರಣದಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಚಾಲನೆ ನೀಡಿದರು. ಮೆರವಣಿಗೆ ಹಳೆಯ ಬಸ್ ನಿಲ್ದಾಣ, ಕನಕದಾಸ ವೃತ್ತ, ಮುಂದೆ ಪುರಸಭೆ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಪದ್ಮಶ್ರೀ ಕಲ್ಯಾಣ ಮಂಟಪದ ವರೆಗೂ ನಡೆಯಿತು. ನೂರಾರು ಮಹಿಳೆಯರು ಕುಂಭ-ಕಳಸ ಹೊತ್ತು ಸಾಗಿದರು. ಬುಡ್ಗ ಜಂಗಮ ವೇಷಗಾರರ ನೃತ್ಯ ಮೆರವಣಿಗೆ ಜನರ ಕಣ್ಮನ ಸೆಳೆಯಿತು. ಕಹಳೆ ವಾದನ, ತಾಷಾ-ಡೋಲು, ಗೊಂಬೆ ಕುಣಿತ, ಕೀಲು ಕುದುರೆ, ಡೊಳ್ಳು, ಝಾಂಜ್ ಮೇಳ ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.