ಮಹಾದಾಯಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ: ಸಂಸದ ಜಗದೀಶ ಶೆಟ್ಟರ್‌

KannadaprabhaNewsNetwork | Published : Jul 13, 2024 1:32 AM

ಸಾರಾಂಶ

ಉತ್ತರ ಕರ್ನಾಟಕದ ಜನರ ಪ್ರಮುಖ ಬೇಡಿಕೆಯಾದ ಕಳಸಾ-ಬಂಡೂರಿ ಹಾಗೂ ಮಹಾದಾಯಿಯನ್ನು ಮಲಪ್ರಭಾ ನದಿಗೆ ಜೋಡಿಸಲು ಮತ್ತು ಶಬರಿ ಕೊಳ್ಳವನ್ನು ಪ್ರವಾಸೋಧ್ಯಮ ಕ್ಷೇತ್ರವಾಗಿಸಲು ಆದ್ಯತೆ ನೀಡುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಉತ್ತರ ಕರ್ನಾಟಕದ ಜನರ ಪ್ರಮುಖ ಬೇಡಿಕೆಯಾದ ಕಳಸಾ-ಬಂಡೂರಿ ಹಾಗೂ ಮಹಾದಾಯಿಯನ್ನು ಮಲಪ್ರಭಾ ನದಿಗೆ ಜೋಡಿಸಲು ಮತ್ತು ಶಬರಿ ಕೊಳ್ಳವನ್ನು ಪ್ರವಾಸೋಧ್ಯಮ ಕ್ಷೇತ್ರವಾಗಿಸಲು ಆದ್ಯತೆ ನೀಡುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಶುಕ್ರವಾರ ರಾಮದುರ್ಗ ಮಂಡಲ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳಸಾ-ಬಂಡೂರಿ ಮತ್ತು ಮಹದಾಯಿ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ನನಗೆ ಉತ್ತಮ ಅವಕಾಶ ದೊರೆತಿದ್ದು, ಕೇಂದ್ರ ಬಜೆಟ್ ಅಧಿವೇಶನದ ಸಮಯದಲ್ಲಿ ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ಮಾಡಿ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ದೊರಕಿಸಲು ಪ್ರಯತ್ನಿಸುತ್ತೇನೆ ಎಂದರು.

ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಆಯ್ಕೆ ಮಾಡಿದ ಹಣ ಮತ್ತು ಅಧಿಕಾರಕ್ಕಿಂತ ವ್ಯಕ್ತಿ ಮುಖ್ಯ ಹಾಗೂ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ ಮತದಾರರ ಪ್ರಬುದ್ಧರು ಎಂದು ತೋರಿಸಿದ್ದಾರೆ. ದಿ. ಸುರೇಶ ಅಂಗಡಿಯವರು ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು.

ರಾಮದುರ್ಗದಲ್ಲಿ ಬಿಜೆಪಿ ಶಾಸಕರಿಲ್ಲ ಎಂದು ನಿರಾಸೆಯಾಗಬೇಡಿ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ನಂತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಮದುರ್ಗದಲ್ಲಿ ಭೂದಾನ ಮಾಡಿದರೆ ಕೆಎಲ್‌ಇ ಸಂಸ್ಥೆ ಆಸ್ಪತ್ರೆ ಮತ್ತು ಶಾಲೆಯನ್ನು ಆರಂಭಿಸಲಿದೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮದುರ್ಗದ ಮಹಾದೇವಪ್ಪ ಯಾದವಾಡ, ಜಗದೀಶ ಶೆಟ್ಟರ್‌ ಮುಂತಾದವರಿಗೆ ಟಿಕೇಟ್ ತಪ್ಪಿಸಿದ ಪರಿಣಾಮ ಇಂದು ವಿರೋಧ ಪಕ್ಷದಲ್ಲಿ ಇರಬೇಕಾಗಿದೆ ಎಂದ ಅವರು, ಪಕ್ಷದ ನಾಯಕರು ಮುಂಬರುವ ಚುನಾವಣೆಯಲ್ಲಿ ಈ ರೀತಿಯ ಪ್ರಮಾದ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಧನಲಕ್ಷ್ಮೀ ಶುಗರ್ಸ್‌ ಅಧ್ಯಕ್ಷ ಮಲ್ಲಣ್ಣ ಯಾದವಾಡ,

ಜಿಪಂ ಮಾಜಿ ಸದಸ್ಯ ರಮೇಶ ದೇಶಪಾಂಡೆ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಮೇಶ ದೇಶಪಾಂಡೆ, ಪಿ.ಎಫ್. ಪಾಟೀಲ, ಮಾರುತಿ ತುಪ್ಪದ, ಎಸ್.ಎಸ್. ಢವಣ, ಮಾರುತಿ ಕೊಪ್ಪದ ಇದ್ದರು.

Share this article