ಸಿಂದಗಿ ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಓದುಗರಿಗೆ ಜ್ಞಾನಾರ್ಜನೆಯ ಕೇಂದ್ರವಾಗಬೇಕಾದ ಪಟ್ಟಣದ ಸಾರ್ವಜನಿಕ ಗ್ರಂಥಾಲಯವು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ ಎದುರಾಗಿದೆ.

ಸಿದ್ದಲಿಂಗ ಕಿಣಗಿ

ಕನ್ನಡಪ್ರಭ ವಾರ್ತೆ ಸಿಂದಗಿ

ಇಂದಿನ ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಓದುವ ಹಸಿವಿಗಾಗಿ ಗ್ರಂಥಾಲಯಗಳತ್ತ ಯುವ ಜನಾಂಗ ಹೆಚ್ಚೆಚ್ಚು ಆಕರ್ಷಿಸುತ್ತಿದ್ದಾರೆ. ಆದರೆ, ಓದುಗರಿಗೆ ಜ್ಞಾನಾರ್ಜನೆಯ ಕೇಂದ್ರವಾಗಬೇಕಾದ ಪಟ್ಟಣದ ಸಾರ್ವಜನಿಕ ಗ್ರಂಥಾಲಯವು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ ಎದುರಾಗಿದೆ.

ಪಟ್ಟಣದ ಬಸ್‌ ನಿಲ್ದಾಣದ ಹತ್ತಿರದ ಸಾರ್ವಜನಿಕ ಗ್ರಂಥಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ಅಲ್ಲಿನ ಅವ್ಯವಸ್ಥೆಗಳ ಸಾಕ್ಷಾತ್‌ ದರ್ಶನವಾಗುತ್ತದೆ. ಸ್ವಂತ ಕಟ್ಟಡವಿದೆ. ಆದರೆ, ಅದು ಸುಮಾರು ವರ್ಷಗಳ ಹಳೆಯದ್ದಾಗಿದ್ದರಿಂದ ಶಿಥಿಲವಾಗಿದೆ. ಹೆಚ್ಚು ಜನಸಂಖ್ಯೆ ಇರುವ ತಾಲೂಕು ಕೇಂದ್ರವಾದ ಸಿಂದಗಿ ಶಾಖೆಗೆ ಸುಸಜ್ಜಿತ ಮತ್ತು ಎಲ್ಲ ಭೂತ ಸೌಕರ್ಯ ಹೊಂದಿದ ಕಟ್ಟಡ ಇಲ್ಲದಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ, ಕಥೆ, ಕಾದಂಬರಿ, ಕವನ ಸಂಕಲನ ಹಾಗೂ ಅನೇಕ ವಿಶ್ವವಿದ್ಯಾಲಯಗಳ ಸುಮಾರು 38 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಕನ್ನಡ, ಇಂಗ್ಲಿಷ್‌ ಸೇರಿದಂತೆ ಅನೇಕ ದಿನಪತ್ರಿಕೆಗಳು ಬರುತ್ತವೆ. ಆದರೆ, ಗ್ರಂಥಾಲಯ ಕಿರಿದಾಗಿರುವುದು ಹಾಗೂ ಸೂಕ್ತ ಕಬೋರ್ಡ ಇಲ್ಲದ್ದರಿಂದ ಸಾವಿರಾರು ಪುಸ್ತಕಗಳು ಚೀಲದಲ್ಲಿಯೆ ಉಳಿದಿವೆ. ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ಓದುಗರು ಗ್ರಂಥಾಲಯದತ್ತ ಮುಖ ಮಾಡಲು ಹಿಂಜರಿಯುವಂತಾಗಿದೆ.

ಮಳೆಗಾಲದಲ್ಲಿ ಛಾವಣಿಯಿಂದ ನೀರು ಬಿದ್ದು ಸಾಕಷ್ಟು ಪುಸ್ತಕಗಳು ಹಾಳಾಗಿವೆ. ಸರ್ಕಾರ ಕಾಲ ಕ್ರಮೇಣ ಸಾರ್ವಜನಿಕ ಗ್ರಂಥಾಲಯಗಳನ್ನು ಗ್ರಾ.ಪಂಗಳಿಗೆ ನಿರ್ವಹಣೆ ನೀಡಿ ಅದರ ಮೂಲಕ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಯುತ್ತಿವೆ. ಸಾರ್ವಜನಿಕ ಗ್ರಂಥಾಲಯಗಳನ್ನು ಆಕರ್ಷಿಸುವ ದೃಷ್ಠಿಯಿಂದ ಡಿಜಿಟಲ್ ಲೈಬ್ರರಿ ಮಾಡಲು ಯತ್ನಗಳು ಸಾಗಿವೆ. ಆದರೆ, ಸಿಂದಗಿ ನಗರದ ಗ್ರಂಥಾಲಯ ಮಾತ್ರ ಗೆದ್ದಿಲು ತಿನ್ನುತ್ತಿದೆ.

ಕಟ್ಟಡದ ಸಮಸ್ಯೆಯ ಬಗ್ಗೆ ಗ್ರಂಥಪಾಲಕರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಪರಿಹಾರ ನೀಡುವಲ್ಲಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಗ್ರಂಥಾಲಯದಲ್ಲಿ ಸೌಲಭ್ಯ ವಿಲ್ಲದಿರುವುದು ಒಂದು ಕಡೆಯಾದರೆ ಕಟ್ಟಡದ ಮುಂದೆಯೆ ಇರುವ ಸರ್ಕಾರಿ ಜಾಗೆಯಲ್ಲಿ ಅನಿಧೀಕೃತವಾಗಿ ನಿರ್ಮಾಣಗೊಂಡ ಅಂಗಡಿಗಳಲ್ಲಿ ನಿತ್ಯ ಮೌಂಸಾಹಾರಿ ವ್ಯಾಪಾರ ನಡೆಯುತ್ತದೆ. ಇದರಿಂದ ನಾಯಿ, ಹಂದಿಗಳ ಹಾವಳಿ ಇರುವುದರಿಂದ ಓದುಗರು ಅವುಗಳ ಭಯದಿಂದ ಗ್ರಂಥಾಲಯಕ್ಕೆ ಬರುವುದು ಹಿಂದೇಟು ಹಾಕುತ್ತಿದ್ದಾರೆ. ಕ್ರಮ ಜರುಗಿಸಬೇಕಾದ ಪುರಸಭೆ ಮೌನಕ್ಕೆ ಶರಣಾಗಿದೆ. ಸುಚಿತ್ವ ಕಾಪಾಡಲು ಗ್ರಂಥಾಲಯದ ಅಧಿಕಾರಿಗಳು ಅನೇಕ ಬಾರಿ ಪುರಸಭೆಗೆ ಮನವಿ ಮಾಡಿದರು ಅದಕ್ಕೆ ಉತ್ತರವೇ ದೊರೆತಿಲ್ಲ.

--

ಕೋಟ್‌....

ನಮ್ಮ ಕಾಲೇಜು ಬೇಗ ಮುಗಿಯುತ್ತದೆ. ಮಧ್ಯಾನ್ಹ 4 ಗಂಟೆಗೆ ನಮ್ಮ ಬಸ್ ಬರುತ್ತದೆ. ಅಲ್ಲಿಯವರೆಗೆ ಗ್ರಂಥಾಲಯಕ್ಕೆ ಬಂದು ವಿವಿಧ ಸ್ಫಧಾತ್ಮಕ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುತ್ತೇನೆ. ಆದರೆ ಕಟ್ಟಡ ಕಿರಿದಾಗಿರುವುದರಿಂದ ಇಲ್ಲಿ ಸುಮರು 10 - 20 ಜನಕ್ಕೆ ಕುಳಿತು ಓದಲು ಬರುತ್ತದೆ. ಒಂದೊಂದು ಬಾರಿ ನಾನು ನಿಂತು ಓದಿದ್ದೇನೆ. ಕೂಡಲೆ ಸುಸಜ್ಜಿತ ಕಟ್ಟಡ ಮತ್ತು ವಿವಿಧ ಸೌಲಭ್ಯಗಳಿಂದ ಗ್ರಂಥಾಲಯ ನಿರ್ಮಾಣವಾಗಬೇಕು.

- ದೀಪಾ ಪಾಟೀಲ, ಕಾಲೇಜು ವಿದ್ಯಾರ್ಥಿನಿ ಸಿಂದಗಿ

ನಿತ್ಯ ಗ್ರಂಥಾಲಯಕ್ಕೆ ಓದಲು ಬರುತ್ತೇನೆ. ವಿವಿಧ ಪುಸ್ತಕಗಳು ಇಲ್ಲಿದ್ದರು ಕಟ್ಟಡದಲ್ಲಿ ಜಾಗದ ಕೊರತೆಯಿಂದ ಅನೇಕ ಪುಸ್ತಕಗಳು ಚೀಲದಲ್ಲಿಯೆ ಇವೆ. ಬೇಕಾದ ಪುಸ್ತಕವನ್ನು ಕೇಳಿ ಪಡೆದುಕೊಳ್ಳುತ್ತೇನೆ. ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾಗಿರುವುದರಿಂದ ತೊಂದರೆಯಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಯೋಗ್ಯ ಕಟ್ಟಡ ಮತ್ತು ಮೂಲ ಸೌಕರ್ಯ ದೊರಕಿಸಿ ಕೊಡಲು ವಿನಂತಿಸುತ್ತೇನೆ.

- ಶರಣಪ್ಪ ಬಿರಾದಾರ. ನಿವೃತ್ತ ನೌಕರರು ಸಿಂದಗಿ

ಇಲ್ಲಿನ ಗ್ರಂಥಾಲಯದ ವ್ಯವಸ್ಥೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ, ಯುವಕರ ಮತ್ತು ವೃದ್ದರ ಹಿತದೃಷ್ಠಿಯಿಂದ ಗ್ರಂಥಾಲಯಕ್ಕೆ ಸೂಕ್ತ ಅನುದಾನ ತಂದು ತಾಲೂಕಿನಲ್ಲಿಯೇ ಸುಸಜ್ಜಿತ ಮತ್ತು ವೈಜ್ಞಾನಿಕ ಗ್ರಂಥಾಲಯ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ.

- ಅಶೋಕ ಮನಗೂಳಿ , ಶಾಸಕರು ಸಿಂದಗಿ.

Share this article