ಎಸ್‌ಐಆರ್‌ ಅಕ್ರಮ: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ: ಜೋಶಿ

KannadaprabhaNewsNetwork |  
Published : Jul 05, 2026, 02:15 AM IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಕರ್ನಾಟಕದ ಕೇಂದ್ರ ಸಚಿವರು ಹಾಗೂ ಬಿಜೆಪಿ ಪ್ರಮುಖರು ಸೇರಿ ರಾಜ್ಯ ಚುನಾವಣಾ ಆಯೋಗದ ಸಿಇಒ ಅವರನ್ನು ಭೇಟಿ ಮಾಡಿ ಎಸ್‌ಐಆರ್‌ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಗಮನ ಸೆಳೆಯಲಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಪರೀಕ್ಷೆಗಳಲ್ಲಿ ನಡೆಯುವ ಸಾಮೂಹಿಕ ನಕಲಿನಂತೆ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ, ಹಗರಣಕ್ಕೆ ಬ್ರೇಕ್‌ ಹಾಕಲು ಇಷ್ಟರಲ್ಲೇ ರಾಜ್ಯ ಸಿಇಒ ಬಳಿ ಬಿಜೆಪಿ ನಿಯೋಗ ತೆರಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕೇಂದ್ರ ಸಚಿವರು ಹಾಗೂ ಬಿಜೆಪಿ ಪ್ರಮುಖರು ಸೇರಿ ರಾಜ್ಯ ಚುನಾವಣಾ ಆಯೋಗದ ಸಿಇಒ ಅವರನ್ನು ಭೇಟಿ ಮಾಡಿ. ಅಕ್ರಮಗಳ ಬಗ್ಗೆ ದಾಖಲೆ ಸಮೇತ ಗಮನ ಸೆಳೆಯಲಿದ್ದೇವೆ ಎಂದರು.

ರಾಜ್ಯಾದ್ಯಂತ ಮಸೀದಿ, ಸಮುದಾಯ ಭವನ, ಸಾರ್ವಜನಿಕ ಪ್ರದೇಶಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಸಾಮೂಹಿಕವಾಗಿ ನಡೆಯುತ್ತಿದೆ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಂತಹ ರೀತಿಯಲ್ಲಿದೆ. ಕರಪತ್ರದಂತೆ ಎಸ್‌ಐಆರ್‌ ಫಾರ್ಮ್‌ ಹಂಚಲಾಗುತ್ತಿದೆ. ಬಿಎಲ್‌ಒಗಳು ಯಾರಿಗೂ ಹೆದರದೆ ಅಕ್ರಮವೆಸಗುತ್ತಿದ್ದಾರೆ ಎಂದರು.ತಕರಾರು ಮಾಡಿದರೂ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ. ದೆಹಲಿಗೆ ಬೇಕಾದರೂ ಹೇಳಿʼ ಎಂದು ಉದ್ದಟತನ ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ. ಇದೆಲ್ಲದರ ಬಗ್ಗೆಯೂ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಜೋಶಿ ಹೇಳಿದರು.

ಹುಬ್ಬಳ್ಳಿ-ಧಾರವಾಡದ ವಾರ್ಡ್‌ ಸಂಖ್ಯೆ 66, ಬೂತ್‌ ನಂ. 55, ಮುಲ್ಲಾನ ಓಣಿ ಹೀಗೆ ಅನೇಕ ಕಡೆ ಎಸ್‌ಐಆರ್‌ ಅರ್ಜಿಗಳ ಸಾಮೂಹಿಕ ವಿತರಣೆ ನಡೆದಿದೆ. ಇನ್ನು ಸವಣೂರು ತಾಲೂಕಿನ ಬೂತ್‌ ನಂ.184, 185, 186ರಲ್ಲಿ, ಬಂಕಾಪುರ ಮಸೀದಿಗಳಲ್ಲಿ ಪ್ರಕ್ರಿಯೆ ನಡೆದಿದೆ. ವಾಟ್ಸ್‌ಆ್ಯಪ್‌ಗಳಲ್ಲಿ ರಾಜಾರೋಷವಾಗಿ ಫೋಟೋ ಸಮೇತ ಹಾಕಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಸಾಕ್ಷ್ಯ ಸಮೇತ ಚುನಾವಣಾ ಆಯುಕ್ತರಿಗೆ ಸಲ್ಲಿಸುತ್ತೇವೆ ಎಂದರು.

ಎಸ್‌ಐಆರ್‌ ಕುರಿತು ಸುಪ್ರೀಂಕೋರ್ಟ್‌ ವರೆಗೆ ಹೋದರೂ ಕೋರ್ಟ್‌ ಸಂವಿಧಾನವನ್ನು ಎತ್ತಿ ಹಿಡಿದಿದೆ. ಹಾಗಾಗಿ ಇದರಲ್ಲಿ ಯಾರೂ ಯಾರಿಗೂ ಹೆದರಬೇಕಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಅವರವರ ಕರ್ತವ್ಯ ಸರಿಯಾಗಿ ನಿರ್ವಹಿಸಬೇಕು ಎಂದು ಜೋಶಿ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಪ್ರತಿ ಮನೆ-ಮನೆಗೆ ಹೋಗಿ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾರ ಒತ್ತಡಕ್ಕೂ ಒಳಗಾಗಬೇಕಿಲ್ಲ. ಸಿಬ್ಬಂದಿಗೆ ಕಾಲಮಿತಿ ಕಡಿಮೆ ಎನಿಸಿದರೆ ಆಯೋಗ ಹೆಚ್ಚಿನ ಸಮಯ ನೀಡಬಹುದು ಎಂದರು.

2010ರಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಹೆಸರು ತೆಗೆಯದಂತೆ ಆದೇಶ ಮಾಡಿಟ್ಟಿದ್ದರು. ಮತಪಟ್ಟಿಯಲ್ಲಿ ಯಾರಾದರೂ ಹೆಸರು ತೆಗೆಯಬೇಕಿದ್ದರೆ, ಸೇರಿಸಬೇಕಿದ್ದರೆ ಸ್ವಯಂ ಆಗಿ ಅರ್ಜಿ ಕೊಡಬೇಕಿತ್ತು ಎಂದ ಸಚಿವರು, ನಾವು ಯಾರನ್ನೂ ತೆಗೆಯಿರಿ ಅಥವಾ ಸೇರಿಸಿ ಎಂದಿಲ್ಲ. ಹಿಂದೂ, ಮುಸಲ್ಮಾನ್‌, ಸಿಖ್‌, ಕ್ರಿಶ್ಚಿಯನ್‌ ಯಾವುದೇ ಜಾತಿ-ಧರ್ಮದವರಿರಲಿ ಸರಿಯಾದ ರೀತಿ ಮಾಹಿತಿ ದಾಖಲು ಮಾಡಿ ಎಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮೃತಪಟ್ಟವರು, ಸ್ಥಳಾಂತರವಾದವರು ಮತ್ತು ಅಕ್ರಮ ವಲಸಿಗರ ಪರಿಷ್ಕರಣೆ ಮಾತ್ರ ಆಗಬೇಕಿದೆ. ಹಾಗಾಗಿ ಯಾವುದೇ ಬಿಎಲ್‌ಒಗಳು ಮತ್ತು ಎಸ್‌ಐಆರ್‌ ಸಿಬ್ಬಂದಿ ಅನಾವಶ್ಯಕ ಅಕ್ರಮದಲ್ಲಿ ತೊಡಗಿ ಸಿಲುಕಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಾಪಂ ಸಿದ್ಧ
ಸಾಲಗಾರರ ಕಿರುಕುಳಕ್ಕೆ ಮೂವರು ಬಲಿ