ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ 10 ದಿನ ವಿಸ್ತರಣೆ

KannadaprabhaNewsNetwork |  
Published : Jul 16, 2026, 02:15 AM IST
ಚಿತ್ರ: ಶೋರನಜೀತ್ ಮಂಡಲ್ | Kannada Prabha

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ವೇಳಾಪಟ್ಟಿಯನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಕೇಂದ್ರ ಚುನಾವಣಾ ಆಯೋಗವು ಬುಧವಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ವೇಳಾಪಟ್ಟಿಯನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಕೇಂದ್ರ ಚುನಾವಣಾ ಆಯೋಗವು ಬುಧವಾರ ಆದೇಶ ಹೊರಡಿಸಿದೆ.

ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳ ವಿತರಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯವನ್ನು ಜು.29ಕ್ಕೆ ಮುಗಿಸಬೇಕಿತ್ತು. ಈಗ ಆ ವೇಳಾಪಟ್ಟಿಯನ್ನು ಆ.8ರವರೆಗೆ ವಿಸ್ತರಿಸಲಾಗಿದೆ.

ಮನೆ-ಮನೆ ಭೇಟಿ ಅವಧಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಎಸ್‌ಐಆರ್‌ನ ಎಲ್ಲಾ ಪ್ರಕ್ರಿಯೆಗಳ ವೇಳಾಪಟ್ಟಿಯು ವಿಸ್ತರಣೆಯಾಗಿದೆ. ಅ.7ಕ್ಕೆ ಪ್ರಕಟವಾಗಬೇಕಿದ್ದ ಅಂತಿಮ ಮತದಾರರ ಪಟ್ಟಿ, ಅ.19ಕ್ಕೆ ಪ್ರಕಟವಾಗಲಿದೆ.

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಪ್ರಗತಿ ಉತ್ತಮವಾಗಿದೆ. ಇನ್ನೂ 15 ದಿನ ಬಾಕಿ ಇರುವಂತೆಯೇ ಗಣತಿ ನಮೂನೆ ವಿತರಣೆ ಕಾರ್ಯ ಶೇ.96 ಮತ್ತು ಗಣತಿ ನಮೂನೆಗಳ ಡಿಜಿಟಲೀಕರಣ ಶೇ.40ರ ಗಡಿ ದಾಟಿದೆ. ಹೀಗಾಗಿ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸುವ ಪ್ರಮೇಯವೇ ಉದ್ಭವಿಸಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರು ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಆದರೆ ಸುದ್ದಿಗೋಷ್ಠಿ ಮುಗಿದ ಒಂದು ಗಂಟೆ ನಂತರ ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್‌ ವೇಳಾಪಟ್ಟಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇದು ಸಾಕಷ್ಟು ಅಚ್ಚರಿಯನ್ನು ಮೂಡಿಸಿದೆ.

ರಾಜ್ಯದ ಕೋರಿಕೆ ಪತ್ರ ಆಧಾರದಲ್ಲಿ ವಿಸ್ತರಣೆ:

ಜುಲೈ 14ರಂದು ನಿಮ್ಮಿಂದ (ರಾಜ್ಯ ಚುನಾವಣಾಧಿಕಾರಿ ಕಚೇರಿ) ಬಂದಿದ್ದ ಕೋರಿಕೆ ಪತ್ರದ ಆಧಾರದಲ್ಲಿ ಕರ್ನಾಟಕದಲ್ಲಿ ಎಸ್‌ಐಆರ್‌ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಆದೇಶದ ಪ್ರತಿಯನ್ನು ರವಾನಿಸಿದೆ.

3.71 ಲಕ್ಷ ಮತದಾರರು ಮೃತಪಟ್ಟಿರುವುದು ಪತ್ತೆ:

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅನ್ಬುಕುಮಾರ್, ರಾಜ್ಯದಲ್ಲಿ ಈವರೆಗೆ 5.29 ಕೋಟಿ ಎನ್ಯುಮರೇಷನ್ ಫಾರಂ ಹಂಚಿಕೆ ಮಾಡಿದ್ದೇವೆ. ಇನ್ನು 25.61 ಲಕ್ಷ ಎನ್ಯುಮರೇಷನ್ ಫಾರಂ ಹಂಚುವುದು ಬಾಕಿ ಇದೆ. ಈವರೆಗೆ ರಾಜ್ಯದಲ್ಲಿ ಶೇ.95.58 ಅರ್ಜಿ ಹಂಚಿಕೆ ಕಾರ್ಯ ಪೂರ್ಣಗೊಂಡಿದೆ. 2.20 ಕೋಟಿ ಎನ್ಯುಮರೇಷನ್ ಫಾರಂ ಡಿಜಿಟಲೈಸ್‌ ಆಗಿದೆ. ಆನ್‌ನಲ್ಲಿ ಈವರೆಗೂ 4.26 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ ರಾಜ್ಯದಲ್ಲಿ 3.71 ಮತದಾರರು ಮೃತಪಟ್ಟಿರುವುದು ಪತ್ತೆಯಾಗಿದೆ. 2002ರ ಮತಪಟ್ಟಿಯಲ್ಲಿದ್ದ 3,52,004 ಮತದಾರರು ಮೃತರಾಗಿದ್ದಾರೆ ಎಂದು ತಿಳಿಸಿದರು.

ಒಟ್ಟು 13 ಜಿಲ್ಲೆಗಳಲ್ಲಿ ಶೇ.100 ಅರ್ಜಿ ಹಂಚಿಕೆ:

ಒಟ್ಟು 13 ಜಿಲ್ಲೆಗಳಲ್ಲಿ ಶೇ.100 ಎನ್ಯುಮರೇಷನ್ ಫಾರಂ ಹಂಚಿಕೆ ಮಾಡಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.100 ರಷ್ಟು ಎನ್ಯುಮರೇಷನ್ ಫಾರಂ ಹಂಚಿಕೆ ಮಾಡಲಾಗಿದೆ. ಜತೆಗೆ 11 ಜಿಲ್ಲೆಗಳಲ್ಲಿ ಶೇ.99 ರಷ್ಟು ಫಾರಂ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

-ಬಾಕ್ಸ್-ಪರಿಷ್ಕರಣಾ ಚಟುವಟಿಕೆಗಳುಪರಿಷ್ಕೃತ ವೇಳಾಪಟ್ಟಿ

ಬಿಎಲ್‌ಒಗಳು ಮನೆ ಮನೆಗೆ ಭೇಟಿಜೂನ್‌ 30 ರಿಂದ ಆ.8ರವರೆಗೆ

ಕರಡು ಮತದಾರರ ಪಟ್ಟಿಯ ಪ್ರಕಟಣೆಆ.17ಕ್ಕೆಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಆ.17 ರಿಂದ ಸೆ.16 ರವರೆಗೆ

ಆಕ್ಷೇಪಣೆಯಗಳ ವಿಲೇವಾರಿಆ.17 ರಿಂದ ಅ.15ರವರೆಗೆಅಂತಿಮ ಮತದಾರರ ಪಟ್ಟಿ ಪ್ರಕಟ ಅ.19 ಕ್ಕೆ ವಾರಾಂತ್ಯದಲ್ಲಿ ಕ್ಯಾಂಪೇನ್‌:

ಮತದಾರರಿಗೆ ಅನುಕೂಲವಾಗುವಂತೆ ಗ್ರಾಮಗಳ ಮಟ್ಟದಲ್ಲಿ 30,373 ಮತದಾರರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ತಾಂತ್ರಿಕ ಬೆಂಬಲ ಮತ್ತು ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ಬಿಎಲ್ಒಗಳಿಗಾಗಿ ಪ್ರತಿ ತಾಲೂಕಿನಲ್ಲಿ ಎರಡ್ಮೂರು ಎಂಬಂತೆ ಒಟ್ಟು 6,651 ಬಿಎಲ್‌ಒ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.

ಅಲ್ಲದೇ ಮತದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ ವಾರಾಂತ್ಯದಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರಗಳಂದು ಕ್ಯಾಂಪೇನ್‌ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಮತದಾರರಿಗೂ ಎನ್ಯುಮರೇಷನ್ ಫಾರಂ ತುಂಬಲು ಮತ್ತು ಹಿಂತಿರುಗಿಸಲು ಸಹಾಯ ಮಾಡುವುದು ತಮ್ಮ ಗುರಿಯಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಒಂದೇ ಒಂದು ಫಾರಂ ಸಹ ತಪ್ಪು ಪೋಲಿಂಗ್ ಸ್ಟೇಷನ್‌ಗೆ ತಲುಪಿಲ್ಲ. ಎಸ್‌ಐಆರ್‌ ಪ್ರಕ್ರಿಯೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವುದು ಮತ್ತು ಅದನ್ನು ಸರಿಪಡಿಸುವುದಾಗಿ ಅನ್ಬುಕುಮಾರ್ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯನ ನಿಲ್ಲಿಸಿದ ದಕ್ಷಿಣದ ಕೋಗಿಲೆ: ಕೆ.ಟಿ.ಹನುಮಂತು
ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಜೆಡಿಎಸ್ ಬೆಂಬಲಿತ 9 ಮಂದಿ ಆಯ್ಕೆ