ಶ್ರುತಿ ಸಜ್ಜೆ ಮತ್ತು ನವಣೆಯ ಹಾಲುಗರಿಗೆ, ಸುಕ್ಕಿನುಂಡೆ ಮತ್ತು ಮಹೇಶ್ ಹಾರಕದಿಂದ ಪುಳಿಯೋಗರೆ ತಯಾರಿಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಬೆಂಗಳೂರಿನಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲಾ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಗರಿ ಮೂಡಿಸಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿಸಿದ್ದ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಶ್ರುತಿ ಮತ್ತು ಉಮ್ಮತ್ತೂರು ಮಹೇಶ್ ಅವರು ರಾಜ್ಯಮಟ್ಟದ ಸಿರಿಧಾನ್ಯ ಅಡುಗೆ ತಿನಿಸು ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ವರ್ಷದ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಕಳೆದ ಡಿ.17ರಂದು ಜಿಲ್ಲಾಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ನಡೆದಿತ್ತು. ಜಿಲ್ಲಾ ಮಟ್ಟದಲ್ಲಿ ಶ್ರುತಿ ಮತ್ತು ಮಹೇಶ್ ಅವರನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿತ್ತು.ರಾಜ್ಯಮಟ್ಟದಲ್ಲೂ ಉತ್ತಮವಾದ ಸಿರಿಧಾನ್ಯ ಅಡುಗೆ ತಿನಿಸು ತಯಾರಿಸಿದ ಇವರಿಗೆ ಪ್ರಥಮ ಸ್ಥಾನ ದೊರೆತಿದ್ದು, 50 ಸಾವಿರ ರು. ನಗದು ಬಹುಮಾನ ನೀಡಿದೆ. 90 ನಿಮಿಷದ ಅವಧಿಯಲ್ಲಿ ಅಡುಗೆ ಪೂರ್ಣಗೊಳಿಸಬೇಕು. ಈ ಅವಧಿಯಲ್ಲೇ ಅಡುಗೆಗೆ ಅಗತ್ಯವಾದ ಎಲ್ಲವನ್ನು ಸಿದ್ದಮಾಡಿಕೊಳ್ಳಬೇಕೆಂಬುದು ಸ್ಪರ್ಧೆಯ ನಿಯಮ ಈ ಅವಧಿಯಲ್ಲಿ ಅಂಕಹಳ್ಳಿಯ ಶ್ರುತಿ ಸಜ್ಜೆ ಮತ್ತು ನವಣೆಯಿಂದ ಹಾಲುಗರಿಗೆ ಮತ್ತು ಸುಕ್ಕಿನುಂಡೆ ಮತ್ತು ಉಮ್ಮತ್ತೂರು ಮಹೇಶ್ ಅವರು ಹಾರಕದಿಂದ ಪುಳಿಯೋಗರೆ ತಯಾರಿಸಿದ್ದರು.ರಾಜ್ಯದ 31 ಜಿಲ್ಲೆಗಳಿಂದಲೂ ತಲಾ ಇಬ್ಬರು ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು, ನಾನಾ ಬಗೆಯ ತಿನಿಸುಗಳನ್ನು ತಯಾರಿ ಮಾಡಿದ್ದರು. ಅಂತಿಮವಾಗಿ ಜಿಲ್ಲೆಯ ಶ್ರುತಿ ಮತ್ತು ಮಹೇಶ್ ತಯಾರಿಸಿದ್ದ ತಿನಿಸುಗಳಿಗೆ ರುಚಿ , ಗುಣಮಟ್ಟದ ಆಧಾರದಲ್ಲಿ ಪ್ರಥಮ ಬಹುಮಾನ ಬಂದಿದೆ. ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಶ್ರುತಿ ಮತ್ತು ಮಹೇಶ್ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ, ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಬಹುಮಾನ ನೀಡುವ ಮೂಲಕ ಅಭಿನಂದಿಸಿದರು.