ಪಹಲ್ಗಾಮ್‌ನಲ್ಲಿ 7 ಕಿಮೀ ಓಡಿ ಉಗ್ರರಿಂದ ಪಾರಾದ ಶಿರಸಿ ಕುಟುಂಬ!

KannadaprabhaNewsNetwork |  
Published : Apr 24, 2025, 11:50 PM ISTUpdated : Apr 25, 2025, 01:02 PM IST
ಭಯೋತ್ಪಾದಕರ ಗುಂಡಿನ ದಾಳಿಗೂ ಕೆಲಕಾಲ ಮುಂಚೆ ಶಿರಸಿಯ ಪ್ರದೀಪ ಹೆಗಡೆ ಕುಟುಂಬ ಅದೇ ಸ್ಥಳದಲ್ಲಿ ತೆಗೆದುಕೊಂಡ ಫೋಟೋ | Kannada Prabha

ಸಾರಾಂಶ

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಡುವೆ ಸಿಲುಕಿದ ಶಿರಸಿಯ ಗುಬ್ಬಿಗದ್ದೆಯ ಕುಟುಂಬದ ಮೂವರು ಪವಾಡಸದೃಶ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ! ಪ್ರದೀಪ ಹೆಗಡೆ ಕುಟುಂಬದವರು ಗುರುವಾರ ಬೆಂಗಳೂರಿಗೆ ಬಂದು ತಲುಪಿದ್ದು, ಆ ಘಟನೆಯನ್ನು ''ಕನ್ನಡಪ್ರಭ''ಕ್ಕೆ ವಿವರವಾಗಿ ತೆರೆದಿಟ್ಟರು.

ವಸಂತಕುಮಾರ್ ಕತಗಾಲ

ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಡುವೆ ಸಿಲುಕಿದ ಶಿರಸಿಯ ಗುಬ್ಬಿಗದ್ದೆಯ ಕುಟುಂಬದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ!

ಮೂಲತಃ ಗುಬ್ಬಿಗದ್ದೆಯವರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರದೀಪ ಹೆಗಡೆ, ಪತ್ನಿ ಶುಭಾ ಹಾಗೂ ಪುತ್ರ ಸಿದ್ಧಾಂತ ಕೂದಲೆಳೆ ಅಂತರದಲ್ಲಿ ಭಯೋತ್ಪಾದಕರ ಗುಂಡಿನ ಮೊರೆತದಲ್ಲಿ ಬಚಾವಾಗಿ ಬಂದವರು.

ಈ ಕುಟುಂಬ ಶಿರಸಿಯ ನೇಸರ ಟೂರ್ಸ್ ಮೂಲಕ ಏ. 21ಕ್ಕೆ ಕಾಶ್ಮೀರದ ಶ್ರೀನಗರಕ್ಕೆ ತೆರಳಿದ್ದರು. 22ರ ಬೆಳಗ್ಗೆ 8 ಗಂಟೆಗೆ ಪಹಲ್ಗಾಮ್‌ಗೆ ಹೊರಟು 11 ಗಂಟೆಗೆ ತಲುಪಿದರು. ಅಲ್ಲಿಂದ 7 ಕಿ.ಮೀ. ದೂರದ ಮಿನಿ ಸ್ವಿಜರ್‌ಲ್ಯಾಂಡ್ ಎಂದು ಕರೆಯುವ ಬೈಸರನ್ ಹುಲ್ಲುಗಾವಲಿಗೆ ಕುದುರೆ ಏರಿ ಹೊರಟರು. ಕೆಸರಿನ ದಾರಿಯಲ್ಲಿ ಕ್ರಮಿಸಿ 1.15ಕ್ಕೆ ಬೈಸರನ್ ತಲುಪಿದರು. ಅದೊಂದು 5-6 ಎಕರೆ ಇರುವ ತಾಣ. ಒಂದೇ ಒಂದು ಪ್ರವೇಶ ದ್ವಾರ. ಸುಮಾರು ಒಂದು ಗಂಟೆ ಓಡಾಡಿದ ಮೇಲೆ ಮ್ಯಾಗಿ ಹಾಗೂ ಟೀ ಕುಡಿಯಲು ಕುಳಿತಾಗ ಏಕಾಏಕಿ ಎರಡು ಬಾರಿ ಫೈರಿಂಗ್ ಸದ್ದು ಕೇಳಿಸಿತು. ಹೊಟೇಲ್‌ನವರಲ್ಲಿ ಪ್ರಶ್ನಿಸಿದರೆ ಅದು ಪಟಾಕಿ ಎಂದು ಹೇಳಿದರು. ಆದರೆ ಕೆಲವೇ ಕ್ಷಣಗಳಲ್ಲಿ ಇವರು ಮೊದಲು ಫೋಟೋ ತೆಗೆಯುತ್ತಿದ್ದ ಸ್ಥಳದಿಂದ ಇಬ್ಬರು ಶೂಟ್ ಮಾಡುತ್ತ ಬರುತ್ತಿರುವುದು ಕಂಡು ಅವಾಕ್ಕಾದರು. ಇವರಿಗೂ ಶೂಟ್ ಮಾಡುತ್ತಿದ್ದವರಿಗೂ ಕೇವಲ 100 ಅಡಿಯಷ್ಟು ಅಂತರ ಇತ್ತು. ಒಂದು ಗುಂಡು ಪತ್ನಿ ಶುಭಾ ಕಿವಿಯ ಪಕ್ಕದಲ್ಲೇ ಹಾದುಹೋದಾಗ ಸಾವು ಸಮೀಪಿಸಿದ ಅನುಭವ ಉಂಟಾಯಿತು. ಸಂಭ್ರಮ, ಸಡಗರ, ಕೇಕೆ ಹಾಕುತ್ತಿದ್ದ ಜನರಿಗೆ ಹಠಾತ್ತಾಗಿ ಗುಂಡಿನ ಮೊರೆತ ಕೇಳಿ ಆಕ್ರಂದನ, ಚೀರಾಟ ಶುರುವಾಯಿತು.

ಅಲ್ಲಿದ್ದವರೆಲ್ಲ ಗೇಟ್ ಕಡೆಗೆ ಓಡಿ ಎಂದರು. ಪ್ರದೀಪ್ ಮಗ ಸಿದ್ಧಾಂತನ ಕೈಹಿಡಿದುಕೊಂಡು ಓಟಕಿತ್ತರೆ, ಪತ್ನಿ ಶುಭಾ ಮುಂದೆ ಓಡುತ್ತಿದ್ದರು. ಸುಮಾರು 6 ಕಿಮೀ ಕೆಸರಿನಲ್ಲಿ ಓಡಿ ಬಂದ ತರುವಾಯ ಮೂವರು ಗನ್ ಮ್ಯಾನ್ ಕಾಣಿಸಿದರು. ಆಗ ಇವರು ನಮ್ಮ ಕತೆ ಮುಗಿಯಿತು ಎಂದು ಎನ್ನುವಷ್ಟರಲ್ಲಿ ಅವರು ನಮ್ಮದೆ ಭದ್ರತಾ ಸಿಬ್ಬಂದಿಯಾಗಿದ್ದನ್ನು ತಿಳಿದು ನಿಟ್ಟುಸಿರು ಬಿಟ್ಟರು. ಅಲ್ಲಿಂದ ಸೈನಿಕರ ಪಡೆಯೇ ಅತ್ತ ಧಾವಿಸುತ್ತಿತ್ತು. ಅಲ್ಲಿಂದ ಪಾರಾಗಿ ಶ್ರೀನಗರದತ್ತ ಕಾರಿನಲ್ಲಿ ಹೊರಟರು. ಆನಂತರ ವಿಡಿಯೋ, ಸುದ್ದಿಗಳು ಬರುತ್ತಿದ್ದಂತೆ ಅದು ಭಯೋತ್ಪಾದಕ ದಾಳಿ, ನಮ್ಮವರ ಮಾರಣಹೋಮವಾಗಿದೆ ಎಂದು ತಿಳಿದು ಇವರು ಬೆಚ್ಚಿಬಿದ್ದರು. ಇವರ ಜತೆ ಕುದುರೆಯಲ್ಲಿ ಹೋಗಿದ್ದ ಇಂಟೆಲಿಜೆನ್ಸಿ ಆಫೀಸರ್ ಒಬ್ಬರು ಮೃತಪಟ್ಟಿದ್ದು ಕೇಳಿ ಇನ್ನಷ್ಟು ಹೌಹಾರಿದರು.

ಗುರುವಾರ ಬೆಂಗಳೂರಿಗೆ ಬಂದು ತಲುಪಿದ್ದು, ಆ ಘಟನೆಯನ್ನು ''''ಕನ್ನಡಪ್ರಭ''''ಕ್ಕೆ ವಿವರವಾಗಿ ತೆರೆದಿಟ್ಟರು.ಅಂತಹ ಭಯೋತ್ಪಾದಕ ದಾಳಿಯಲ್ಲಿ ನಾವು ಬದುಕಿ ಬಂದಿದ್ದೇ ಒಂದು ಪವಾಡ. ಈಗಲೂ ಆ ಭೀಕರ ಘಟನೆಯ ಆಘಾತ ನಮ್ಮನ್ನು ಕಾಡುತ್ತಲೇ ಇದೆ. ನಮ್ಮ ರಾಜ್ಯದವರು, ದೇಶದ ಜನರು ಬಲಿಯಾಗಿದ್ದು ತೀವ್ರ ನೋವು ತಂದಿದೆ ಎಂದು ಉಗ್ರರ ದಾಳಿಯಲ್ಲಿ ಪಾರಾಗಿ ಬಂದ ಪ್ರದೀಪ ಹೆಗಡೆ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ