ನೂರಾರು ಶವ ಹೂತಿಟ್ಟ ಕೇಸ್‌ ಈಗ ಎಸ್‌ಐಟಿಗೆ

KannadaprabhaNewsNetwork |  
Published : Jul 21, 2025, 01:30 AM ISTUpdated : Jul 21, 2025, 06:26 AM IST
ವಿಧಾನಸೌಧ | Kannada Prabha

ಸಾರಾಂಶ

ನೂರಾರು ಶವಗಳನ್ನು ಹೂತ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಗ್ರಾಮದ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

 ಬೆಂಗಳೂರು :  ನೂರಾರು ಶವಗಳನ್ನು ಹೂತ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಗ್ರಾಮದ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಯಾರೋ ಹೇಳಿದರೆಂದು ತನಿಖೆಯನ್ನು ಎಸ್‌ಐಟಿಗೆ ನೀಡಲು ಸಾಧ್ಯವಿಲ್ಲ. ಆರೋಪಗಳ ಕುರಿತು ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ನೀಡುತ್ತಾರೆ ಎಂಬುದನ್ನು ಆಧರಿಸಿ ನಂತರ ಉಳಿದ ವಿಚಾರ ನೋಡೋಣ’ ಎಂದಿದ್ದರು. ಆದರೆ, ಇದೀಗ ಪ್ರಕರಣವನ್ನು ದಿಢೀರ್‌ ಎಸ್‌ಐಟಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್‌ ಮೊಹಾಂತಿ ನೇತೃತ್ವದಲ್ಲಿ ಈ ಎಸ್‌ಐಟಿ ತಂಡ ರಚಿಸಲಾಗಿದೆ. ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್‌, ಸಿಎಆರ್‌ ಕೇಂದ್ರ ಸ್ಥಾನದ ಡಿಸಿಪಿ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ ಇದ್ದಾರೆ.

ಧರ್ಮಸ್ಥಳ ಗ್ರಾಮದ ಪ್ರಕರಣ ಸೇರಿ ಈ ಸಂಬಂಧ ರಾಜ್ಯದ ಇತರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್‌ ಪ್ರಕರಣಗಳ ತನಿಖೆಯನ್ನು ಈ ಎಸ್‌ಐಟಿ ತಂಡಕ್ಕೆ ವರ್ಗಾಯಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಅಂತೆಯೇ ಈ ತಂಡಕ್ಕೆ ಅಗತ್ಯವಿರುವ ಪೊಲೀಸ್‌ ಅಧಿಕಾರಿಗಳು/ಸಿಬ್ಬಂದಿ ಒದಗಿಸುವಂತೆ ಸೂಚಿಸಲಾಗಿದೆ.

ಈ ಎಸ್‌ಐಟಿ ತಂಡ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ತನಿಖಾ ಪ್ರಗತಿ ಬಗ್ಗೆ ಆಗಾಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ವರದಿ ನೀಡುವಂತೆ ಎಸ್ಐಟಿಗೆ ನಿರ್ದೇಶಿಸಲಾಗಿದೆ.

ಸರ್ಕಾರಕ್ಕೆ ವರದಿ:

ಎಸ್‌ಐಟಿ ತಂಡವು ಧರ್ಮಸ್ಥಳ ಗ್ರಾಮದ ಪ್ರಕರಣ ಹಾಗೂ ಈ ಸಂಬಂಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆ ನಡೆಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಖಾಂತರ ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಮಹಿಳಾ ಆಯೋಗದ ಪತ್ರ ಆಧರಿಸಿ ರಚನೆ:

ಧರ್ಮಸ್ಥಳ ಗ್ರಾಮದ ಪ್ರಕರಣ ಸಂಬಂಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಬರೆದಿದ್ದ ಪತ್ರ, ಧರ್ಮಸ್ಥಳ ಗ್ರಾಮದ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ಈ ಎಸ್ಐಟಿ ತಂಡ ರಚಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪತ್ರದಲ್ಲಿ, ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಜು.12ರಂದು ಮಾಧ್ಯಮಗಳು ಮನುಷ್ಯರೊಬ್ಬರ ತಲೆಬುರುಡೆ ದೊರಕಿರುವುದು ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ಆಧರಿಸಿ ಪ್ರಸಾರ ಮಾಡಿದ ವರದಿಯನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಮಾಧ್ಯಮದ ವರದಿ ಮತ್ತು ಶವಗಳನ್ನು ಹೂತಿರುವ ವ್ಯಕ್ತಿ ಹೇಳಿಕೆಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕ ಸಾವು/ಕೊಲೆ ಪ್ರಕರಣಗಳು ಹಾಗೂ ಅತ್ಯಾಚಾರ ಪ್ರಕರಣಗಳ ಸಂಬಂಧ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಮನವಿ ಮಾಡಿದ್ದರು. ಪತ್ರದಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನು ಆಧರಿಸಿ ಸಮಗ್ರ ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 ಸತ್ಯಾಂಶ ಶೀಘ್ರ ಬಹಿರಂಗ ಆಗಲಿ: ಶ್ರೀಕ್ಷೇತ್ರ ಧರ್ಮಸ್ಥಳ

 ಕನ್ನಡಪ್ರಭ ವಾರ್ತೆ ಬೆಳ್ತಂಗಡಿಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ‘ಹಲವಾರು ಶವಗಳನ್ನು ಹೂತ’ ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ರಾಜ್ಯ ಸರ್ಕಾರ ಹಸ್ತಾಂತರಿಸಿದ ಸರ್ಕಾರದ ಈ ನಿಲುವು ಉತ್ತಮವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ.

ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ‘ಸತ್ಯ’. ಆದ್ದರಿಂದ, ಈ ಪ್ರಕರಣದಲ್ಲಿ ಎಸ್ಐಟಿ ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ಧರ್ಮಸ್ಥಳ ಕ್ಷೇತ್ರದ ವಕ್ತಾರ ಕೆ.ಪಾರ್ಶ್ವನಾಥ್‌ ಜೈನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Read more Articles on

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ