ಧರ್ಮಸ್ಥಳ ಕೇಸಲ್ಲಿ 40 ಯೂಟ್ಯೂಬರ್‌ಗಳ ಬೆನ್ನು ಬಿದ್ದ ಎಸ್‌ಐಟಿ

KannadaprabhaNewsNetwork |  
Published : Sep 08, 2025, 01:00 AM ISTUpdated : Sep 08, 2025, 09:26 AM IST
Dharmasthala Controversy

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್, 400-500 ಟ್ರೋಲ್ ಪೇಜರ್‌ಗಳು ಹಾಗೂ 60ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್‌ಗಳು ಕೆಲಸ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

  ಮಂಗಳೂರು :  ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್, 400-500 ಟ್ರೋಲ್ ಪೇಜರ್‌ಗಳು ಹಾಗೂ 60ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್‌ಗಳು ಕೆಲಸ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

 ಇವರೆಲ್ಲರಿಗೂ ಫಂಡಿಂಗ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಯೂಟ್ಯೂಬರ್ಸ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್‌ ನೀಡಿ, ವಿಚಾರಣೆ ನಡೆಸುತ್ತಿದೆ. ಹೀಗಾಗಿ, ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಹಾಗೂ ದೇವಸ್ಥಾನದ ತೇಜೋವಧೆ ಹಿಂದೆ ಭಾರಿ ಷಡ್ಯಂತ್ರವಿದೆ ಎಂದು ಹೇಳಲಾಗುತ್ತಿದೆ. ಯೂಟ್ಯೂಬರ್‌ಗಳಿಗೆ ವಿದೇಶಿ ಫಂಡಿಂಗ್‌ ಗುಮಾನಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿಧ್ವಂಸಕ ಸಂಚಿನ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಗೂ ಕೇಂದ್ರದ ಮೇಲೆ ಒತ್ತಡ ಹೇರಲಾಗಿದೆ.

ಸಮೀರ್‌ನಿಂದ ಆರಂಭಿಸಿ ಕೇರಳ‍ದ ಮನಾಫ್‌ವರೆಗೆ:

ದೂತ ಯೂಟ್ಯೂಬ್‌ ಚಾನೆಲ್‌ನ ಸಮೀರ್‌ ಎಂ.ಡಿ., ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್‌, ಗೋಲ್ಡನ್ ಕನ್ನಡಿಗ ಚಾನೆಲ್ ಯೂಟ್ಯೂಬರ್ ಸುಮಂತ್, ಚಂದನ್‌ ಗೌಡ, ಮತ್ತಿತರರನ್ನು ಕರೆಸಿ ಎಸ್‌ಐಟಿ ತನಿಖೆ ನಡೆಸಿದೆ. ಕೇರಳ ಯೂಟ್ಯೂಬರ್‌ ಮನಾಫ್‌ಗೂ ನೋಟಿಸ್‌ ಜಾರಿಗೊಳಿಸಿದೆ.

ಜುಲೈನಲ್ಲಿ 23 ನಿಮಿಷಗಳ ವಿಡಿಯೋವನ್ನು ತನ್ನ ದೂತ ಚಾನೆಲ್‌ನಲ್ಲಿ ಸಮೀರ್‌ ಅಪ್‌ಲೋಡ್ ಮಾಡಿದ್ದ. ಈ ವೀಡಿಯೊವನ್ನು ಎಐ (ಕೃತಕ ಬುದ್ಧಿಮತ್ತೆ) ಬಳಸಿ ರಚಿಸಲಾಗಿತ್ತು. ಇದು ತಮಿಳು, ಮಲಯಾಳಂ ಮಾಧ್ಯಮಗಳಲ್ಲಿ ಹಾಗೂ ಪಾಕಿಸ್ತಾನ ಸೇರಿ ವಿದೇಶಗಳಲ್ಲೂ ಧರ್ಮಸ್ಥಳ ಬಗ್ಗೆ ಕೆಟ್ಟ ಅಭಿಪ್ರಾಯ ಬಿಂಬಿಸಲು ಕಾರಣವಾಯಿತು. ನಂತರ, ಯೂಟ್ಯೂಬರ್ ಸುಮಂತ್ ಗೌಡ, ಅವರ ಸ್ನೇಹಿತ ಅಭಿಷೇಕ್‌ ಕೂಡ ಯೂಟ್ಯೂಬ್‌ ಮಾಡಿ, ಕ್ಷೇತ್ರದ ವಿರುದ್ದ ಅಪಪ್ರಚಾರ ನಡೆಸಿದ್ದು ಪತ್ತೆಯಾಯಿತು.  

ಇವರು, ಇವರ ಜೊತೆ ಇನ್ನಿತರ ಹಲವು ಇನ್‌ಫ್ಲುಯೆನ್ಸರ್‌ಗಳು ಹಣ ಪಡೆದು ದೇವಸ್ಥಾನದ ವಿರುದ್ಧ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಮೂಲಗಳಿಂದ ಹಣ, ಕಂಟೆಂಟ್, ವಸತಿ ಮತ್ತು ಆಹಾರ ನೀಡಿ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲಾಗಿತ್ತು. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತ್ರದ ಭಾಗ ಎಂದು ಆರೋಪಿಸಲಾಗಿತ್ತು. ಇವೆಲ್ಲ ಕಾರಣಕ್ಕೆ ಎಸ್‌ಐಟಿ ಈ ಯೂಟ್ಯೂಬರ್‌ಗಳಿಗೆ ನೋಟಿಸ್‌ ಜಾರಿಗೊಳಿಸಿ, ಕರೆಸಿ, ವಿಚಾರಣೆ ನಡೆಸಿತ್ತು. ಈಗಲೂ ಅಭಿಷೇಕ್‌ ಮತ್ತಿತರರ ವಿಚಾರಣೆ ಮುಂದುವರಿಯುತ್ತಿದೆ. 

 ಅವಹೇಳನಕ್ಕೆ 8000 ಚಾನೆಲ್‌ ಬಳಕೆ? ಧರ್ಮಸ್ಥಳ ಕ್ಷೇತ್ರದಿಂದ ಇಂತಹ ಚಾನೆಲ್‌ಗಳ ಮೇಲೆ ಗ್ಯಾಗ್‌ (ಮಾತನಾಡಲು ತಡೆ) ಆರ್ಡರ್ ಕೋರಲಾಯಿತು. ಆದರೆ, ಸುಪ್ರೀಂಕೋರ್ಟ್ ಅವುಗಳನ್ನು ನಿರ್ಬಂಧಿಸಲು ನಿರಾಕರಿಸಿತು. ಕರ್ನಾಟಕ ಹೈಕೋರ್ಟ್ ಕೂಡ ಕೆಲವು ಗ್ಯಾಗ್ ಆರ್ಡರ್‌ಗಳನ್ನು ರದ್ದುಗೊಳಿಸಿತು. ಈ ದಿನಗಳಲ್ಲಿ ಸುಮಾರು 8,000 ಯೂಟ್ಯೂಬ್ ಚಾನಲ್‌ಗಳು ದೇವಸ್ಥಾನದ ವಿರುದ್ಧ ಅವಹೇಳನಕಾರಿ ಕಂಟೆಂಟ್ ಹರಡುತ್ತಿವೆ ಎಂದು ಆರೋಪಿಸಲಾಗಿದೆ. 

 ಇವುಗಳನ್ನು ತೆಗೆದುಹಾಕುವಂತೆ ಕೋರ್ಟ್‌ ಮೊರೆ ಹೋದರೂ ಪ್ರಯೋಜನವಾಗಿಲ್ಲ.ಧರ್ಮಸ್ಥಳದ ಪಾಂಗಳದಲ್ಲಿ ಮೂರು ಯೂಟ್ಯೂಬರ್‌ಗಳು (ಅಜಯ್ ಅಂಚನ್, ಅಭಿಷೇಕ್, ವಿಜಯ್) ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ರಿಪೋರ್ಟರ್ ಮೇಲೆ ದಾಳಿ ನಡೆಯಿತು. ಯೂಟ್ಯೂಬರ್‌ಗಳು 2013ರಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೀಡಾದ ಮಹಿಳೆಯ ಕುಟುಂಬದೊಂದಿಗೆ ಸಂದರ್ಶನ ನಡೆಸುತ್ತಿದ್ದರು. ಎಸ್‌ಐಟಿ ತನಿಖೆಯ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

ದಾಳಿಯಲ್ಲಿ ವಾಹನಗಳು ಮತ್ತು ಕ್ಯಾಮರಾಗಳು ಹಾನಿಗೊಳಗಾದವು. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ದರು. ಅಕ್ರಮ ಕೂಟಕ್ಕೆ ಸಂಬಂಧಿಸಿ ಕೇಸು ಕೂಡ ದಾಖಲಾಗಿತ್ತು. ಇದೇ ಯೂಟ್ಯೂಬರ್ಸ್‌ ವಿರುದ್ಧವೂ ಕೇಸು ದಾಖಲಾಗಿದ್ದು, ಎಸ್‌ಐಟಿ ಅವರ ತನಿಖೆಯನ್ನೂ ತಡೆಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!