ಸೈಟ್ ಮಾಲೀಕತ್ವ ವಿವಾದ ತೀವ್ರತೆ: ಎಸ್ಪಿ ಕಚೇರಿಗೆ ನಿರ್ಮಾಪಕಿ ಪುಷ್ಪ ಭೇಟಿ, ದೂರು

KannadaprabhaNewsNetwork |  
Published : Feb 18, 2026, 01:45 AM IST
ನಟ ಯಶ್ ಅವರ ತಾಯಿ ಪುಷ್ಪ ಅವರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸವಿಸ್ತಾರ ದೂರು ಸಲ್ಲಿಸಿದ್ದಾರೆ.  | Kannada Prabha

ಸಾರಾಂಶ

ಹಾಸನ ನಗರದಲ್ಲಿ ಸೈಟ್ ಮಾಲೀಕತ್ವ ವಿಚಾರವಾಗಿ ಉಂಟಾದ ಜಟಾಪಟಿ ಪ್ರಕರಣ ಮತ್ತಷ್ಟು ತೀವ್ರಗೊಂಡಿದ್ದು, ನಿರ್ಮಾಪಕಿ ಪುಷ್ಪ ಅವರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸವಿಸ್ತಾರ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದಲ್ಲಿ ಸೈಟ್ ಮಾಲೀಕತ್ವ ವಿಚಾರವಾಗಿ ಉಂಟಾದ ಜಟಾಪಟಿ ಪ್ರಕರಣ ಮತ್ತಷ್ಟು ತೀವ್ರಗೊಂಡಿದ್ದು, ನಿರ್ಮಾಪಕಿ ಪುಷ್ಪ ಅವರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸವಿಸ್ತಾರ ದೂರು ಸಲ್ಲಿಸಿದ್ದಾರೆ.

ವಿವಾದಿತ ನಿವೇಶನ ತನ್ನದೇ ಎಂದು ದೇವರಾಜ್ ಎಂಬುವರು 2025ರ ಏಪ್ರಿಲ್ 16ರ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಕಾಂಪೌಂಡ್ ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದೇ ಆದೇಶಕ್ಕೆ ಫೆಬ್ರವರಿ 11ರಂದು ನ್ಯಾಯಾಲಯ ತಡೆ ನೀಡಿರುವುದಾಗಿ ಪುಷ್ಪ ಸ್ಪಷ್ಟಪಡಿಸಿದ್ದಾರೆ. ತಡೆ ಆದೇಶ

ಜಾರಿಯಲ್ಲಿದ್ದರೂ ಜೆಸಿಬಿ ಮತ್ತು ಟಿಪ್ಪರ್ ವಾಹನಗಳ ಸಹಾಯದಿಂದ ಏಕಾಏಕಿ ಕಾಂಪೌಂಡ್ ಒಡೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ನಡೆದ ಗಲಾಟೆಯ ವಿಡಿಯೋ ದೃಶ್ಯಾವಳಿಗಳಿರುವ ಪೆನ್ ಡ್ರೈವ್, ನ್ಯಾಯಾಲಯದ ಆದೇಶ ಪ್ರತಿ, ಸೈಟ್ ಖರೀದಿ ಮಾಡಿದ ಕ್ರಯಪತ್ರಗಳ ದಾಖಲಾತಿ ಸೇರಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಎಸ್ಪಿಗೆ ಸಲ್ಲಿಸಲಾಗಿದೆ. ನಮ್ಮ ಬಳಿ ಇರುವ ಎಲ್ಲಾ ದಾಖಲೆಯನ್ನು ನೀಡಿದ್ದೇನೆ. ಪರಿಶೀಲನೆಗೆ ಸಮಯ ಕೇಳಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪುಷ್ಪ ಮಾಧ್ಯಮಗಳಿಗೆ ತಿಳಿಸಿದರು.

ಘಟನೆ ಸಂಭವಿಸಿದ ತಕ್ಷಣವೇ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಿಲ್ಲ ಎಂದು ಪುಷ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಪೌಂಡ್ ಒಡೆಯಲು ಬಳಸಿದ ಜೆಸಿಬಿ ಮತ್ತು ಟಿಪ್ಪರ್ ವಾಹನಗಳನ್ನು ಇದುವರೆಗೂ ಜಪ್ತಿ ಮಾಡಿಲ್ಲ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇದ್ದರೂ ಪ್ರಕರಣವನ್ನು ಅಸಂಜ್ಞೇಯ ಅಪರಾಧವಾಗಿ ದಾಖಲಿಸಲಾಗಿದೆ ಎಂದು ಅವರು ದೂರಿದ್ದಾರೆ.

ಇದು ಅಪರಾಧ. ನಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಹಾನಿ ಮಾಡಲಾಗಿದೆ. ಆದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಸಂಬಂಧಪಟ್ಟ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಪಾತ್ರದ ಕುರಿತು ಕೂಡ ಅವರು ಪ್ರಶ್ನೆ ಎತ್ತಿದ್ದು, ಮೊದಲ ದಿನವೇ ದಾಖಲೆ ಪರಿಶೀಲಿಸಿ ಇಬ್ಬರನ್ನೂ

ಕರೆಯಬಹುದಿತ್ತು. ಆದರೆ ಅದಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ರಕ್ಷಣೆ ಸಿಕ್ಕಿಲ್ಲ. ಓರ್ವ ಮಹಿಳೆಯಾಗಿ ನಾನೇ ಬಂದು ಹೋರಾಡುತ್ತಿದ್ದೇನೆ. ನಮಗೇ ಈ ರೀತಿ ಆಗಿದ್ದರೆ ಇತರರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಪುಷ್ಪ, ತಮ್ಮ ಸೈಟ್ ಬಳಿ ಗಲಾಟೆ ನಡೆಸಿದ ಎಲ್ಲರ ವಿರುದ್ಧವೂ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ನಮ್ಮ ದಾಖಲೆ ತಪ್ಪಿದ್ದರೆ ಸೈಟ್ ವಾಪಸ್ ಕೊಡಲು ಸಿದ್ಧ. ಆದರೆ ನ್ಯಾಯಾಲಯ ತಡೆ ನೀಡಿರುವಾಗ ಏಕಾಏಕಿ ಬಂದು ಕಾಂಪೌಂಡ್ ಒಡೆಯುವುದು ಸರಿಯಲ್ಲ. ನಮ್ಮ ಮನೆಗೂ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಎಸ್ಪಿ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಸೈಟ್ ಮಾಲೀಕತ್ವ ವಿವಾದ ಈಗ ಪೊಲೀಸ್ ಮತ್ತು ನ್ಯಾಯಾಂಗದ ಗಮನ ಸೆಳೆದಿದ್ದು, ಮುಂದಿನ ಕ್ರಮಗಳತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿ-ಪಿಕ್ಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ