ಕನಕಪುರ: ತಾಲೂಕಿನ ತಾವರೆಗಟ್ಟೆ ಗ್ರಾಮದಲ್ಲಿ ಕಾಡಾನೆಗಳು ಬಾಳೆ, ತೆಂಗು, ಅಡಿಕೆ ಸೇರಿದಂತೆ ಹಲವು ಗಿಡಗಳನ್ನು ತುಳಿದು ನಾಶ ಮಾಡಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ
ಕನಕಪುರ: ತಾಲೂಕಿನ ತಾವರೆಗಟ್ಟೆ ಗ್ರಾಮದಲ್ಲಿ ಕಾಡಾನೆಗಳು ಬಾಳೆ, ತೆಂಗು, ಅಡಿಕೆ ಸೇರಿದಂತೆ ಹಲವು ಗಿಡಗಳನ್ನು ತುಳಿದು ನಾಶ ಮಾಡಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ತಾವರಗಟ್ಟೆ ಗ್ರಾಮದ ಪುಷ್ಪ ಪುಟ್ಟರಾಜು ಅವರ ತೋಟಕ್ಕೆ ನುಗ್ಗಿದ ಕಾಡನೆಗಳು ತೋಟದಲ್ಲಿ ನೂರಾರು ಅಡಿಕೆ, ಬಾಳೆ, ಹಲಸು, ರಕ್ತಚಂದನ, ತೇಗ, ಬಟರ್ ಫ್ರೂಟ್ ಹಾಗೂ ಇತರೆ ಹಣ್ಣಿನ ಸಸಿಗಳನ್ನ ನಾಶಪಡಿಸಿವೆ. ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು, ಸೋಮವಾರ ರಾತ್ರಿ ವೇಳೆ ಹೊರ ಬಂದು ರೈತರ ಜಮೀನು, ತೋಟಗಳ ಮೇಲೆ ದಾಳಿ ನಡೆಸಿ, ಲಕ್ಷಾಂತರ ರುಪಾಯಿ ಬೆಲೆ ಬಾಳುವ ಅಪಾರ ಪ್ರಮಾಣದ ಬೆಳೆ ನಾಶವಾಗಿ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ, ಕೂಡಲೇ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಬೆಂಬಲ ಬೆಲೆ ನೀಡಿ, ಆನೆಗಳು ಬಾರದಂತೆ ಎಚ್ಚರವಹಿಸುವಂತೆ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.
ಆನೆಗಳ ಕಾಟದಿಂದ ರೈತರು ಕಂಗಾಲಾಗಿದ್ದು ರೈತರು ಬೇಸತ್ತು ಬೆಳೆ ಬೆಳೆಯುವುದನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಗತಿಪರ ರೈತ ಮಹಿಳೆ ಪುಷ್ಪ ತಮ್ಮ ನೋವು ತೋಡಿಕೊಂಡಿದ್ದಾರೆ. ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ರಾತ್ರಿ ವೇಳೆ ಆನೆಗಳು ದಾಳಿ ನಡೆಸುವುದು ನಿಂತಿಲ್ಲ. ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಸೂಕ್ತ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಿ ಆನೆಗಳ ಹಾವಳಿ ತಡೆ ಯದಿದ್ದರೆ ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ಗ್ರಾಮದವರೆಲ್ಲಾ ಕುರಿ, ಮೇಕೆ, ದನಕರುಗಳನ್ನು ಸೇರಿ, ಅರಣ್ಯಾಧಿಕಾರಿಗಳ ಕಚೇರಿ ಮುಂದೆ ತಂದು ಕಟ್ಟಿಹಾಕಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಾವರೆಗಟ್ಟೆ ಗ್ರಾಮದ ನಾರಾಯಣಸ್ವಾಮಿ, ಶಿವರಾಮು, ಜಯರಾಮು, ರಾಮೇಗೌಡ, ಶ್ರೀನಿವಾಸ್, ವೆಂಕಟಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರಾಮಸಂಜೀವಯ್ಯ, ಸಂದೀಪ್, ಟಿ ಎನ್ ಕೃಷ್ಣ, ಶಾಂತಮ್ಮ, ಕೆಂಪ ಮಾದೇಗೌಡ,ಚಂದ್ರು ಕೆಂಪೇಗೌಡ, ರಾಮಲಿಂಗು ಸೇರಿದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.