ಹಾಸನ ಜಿಲ್ಲೆ ಅಭಿವೃದ್ಧಿಗೆ 16 ಸಾವಿರ ಕೋಟಿ ಅನುದಾನ: ಪ್ರಜ್ವಲ್ ರೇವಣ್ಣ

KannadaprabhaNewsNetwork |  
Published : Apr 01, 2024, 12:55 AM ISTUpdated : Apr 01, 2024, 10:21 AM IST
31ಎಚ್ಎಸ್ಎನ್5 : ಎಂ ಶಿವರ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಶಾಸಕರುಗಳಾದ ಎಚ್ ಡಿ ರೇವಣ್ಣ ಸಿಎನ್ ಬಾಲಕೃಷ್ಣ  ಆನಂದ್ ಕುಮಾರ್ ಅವರನ್ನು ಕಾರ್ಯಕರ್ತರು ಅಭಿನಂದಿಸಿದರು. | Kannada Prabha

ಸಾರಾಂಶ

ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರದಿಂದ 16.5 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

 ಬಾಗೂರು :  ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರದಿಂದ 16.5 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಶನಿವಾರ ತಿಳಿಸಿದರು.

ಹೋಬಳಿಯ ಎಂ.ಶಿವರ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಮನೆಗಳಿಗೂ ಹೇಮಾವತಿ ನದಿಯಿಂದ ನೀರು ಶುದ್ಧೀಕರಿಸಿ ಮನೆ ಮನೆಗೆ ನಲ್ಲಿ ನೀರು ಕಲ್ಪಿಸುವ ಯೋಜನೆಗೆ 4907 ಕೋಟಿ ರು. ಹಣ ಬಿಡುಗಡೆಯಾಗಿದೆ. ತಾಲೂಕಿನ ಹಿರೀಸಾವೆಯಿಂದ ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿಗಳ ನಿರ್ಮಾಣಕ್ಕೆ 1384 ಕೋಟಿ ರು. ಹಣ ಬಿಡುಗಡೆ ಮಾಡಿಸಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಅಪಘಾತಗಳು ತಪ್ಪಿವೆ ಎಂದು ತಿಳಿಸಿದರು.

‘ರಾಜ್ಯದ ತೆಂಗು ಬೆಳೆಯುವ ರೈತರ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ಈ ಸರ್ಕಾರ ವಿಫಲವಾಗಿದೆ. ಕಾರವಾರ ಸೊಲ್ಲಾಪುರ ಎಕ್ಸ್ಪ್ರೆಸ್ ರೈಲುಗಳನ್ನು ಹಿರೀಸಾವೆ ಚನ್ನರಾಯಪಟ್ಟಣದಲ್ಲಿ ನಿಲುಗಡೆ ಮಾಡಲು ಪ್ರಯತ್ನ ಮಾಡಲಾಗಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಿದ್ದರಿಂದ ಎಲ್ಲಾ ಸಮುದಾಯ ಹಾಗೂ ಎಲ್ಲಾ ಪಕ್ಷದವರಿಗೂ ಸಾಲಮನ್ನಾ ಭಾಗ್ಯ ದೊರೆಯಿತು. ರೈತರನ್ನು ಉಳಿಸಲು ಜಾತಿ ಭೇದ ಮಾಡಬಾರದು. ಅನ್ನಭಾಗ್ಯಕ್ಕೆ ಹಣ ಹಾಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಬರ ಬರುತ್ತದೆ. ಕೆರೆಕಟ್ಟೆಗಳು ಬತ್ತಿ ಹೋಗುತ್ತವೆ ಎನ್ನುವ ಪರಿಸ್ಥಿತಿ ಬಂದಿದೆ’ ಎಂದು ಆಡಳಿತ ಪಕ್ಷವನ್ನು ಟೀಕಿಸಿದರು.

‘ರೈತರು ಕೊಳವೆಬಾವಿ ಕೊರೆಸಿಕೊಂಡು ಅವರೇ ಹಣ ಕಟ್ಟಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿಸಿಕೊಳ್ಳಲು 4 ಲಕ್ಷ ರು. ಹಣ ಖರ್ಚಾಗುತ್ತದೆ. ಆದರೂ ಅಂತರ್ಜಲ ಬತ್ತಿ ಕೊಳವೆ ಬಾವಿಗಳಿಂದ ನೀರು ಬರುವುದಿಲ್ಲ. ರೈತರಿಗೆ ಅತ್ಯಂತ ಕಷ್ಟದ ದಿನಗಳು ಬಂದಿವೆ. ಶಾಸಕ ಬಾಲಕೃಷ್ಣ ಅವರ ಹೋರಾಟದ ಫಲವಾಗಿ ಎಲ್ಲಾ ಏತ ನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಶಾಸಕರ ಜತೆ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸಲು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.

ಶಾಸಕ ಎಚ್ ಡಿ ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರ ಬೆಂಬಲ ಬೆಲೆಯ ಕೊಬ್ಬರಿ ಕೊಂಡುಕೊಳ್ಳಲು ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿ ಚುನಾವಣೆ ಮುಗಿದ ಮೇಲೆ ಸರ್ಕಾರಕ್ಕೆ ಮನವಿ ಮಾಡಿ ಉಳಿದ ಒಬ್ಬರಿಗೂ ಬೆಂಬಲ ಬೆಲೆ ಕೊಡಿಸುತ್ತೇನೆ. ಈ ಸರ್ಕಾರ ಬಂದ ಕೂಡಲೇ ಒಬ್ಬರಿಗೆ 15000 ರು. ಬೆಲೆ ನಿಗದಿಪಡಿಸುತ್ತೇವೆ ಎಂದು ರೈತರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ 1400 ರು.ಗೆ ಕೊಡುತ್ತಿದ್ದ ಸ್ಪಿಂಕ್ಲರ್ ಪೈಪುಗಳ ಬೆಲೆ 4,500 ರು. ಮಾಡಿ ಕಳಪೆ ಪೈಪ್ ನೀಡಿ ರೈತರ ಹೆಸರಿನಲ್ಲಿ ಹಣ ಲೂಟಿ ಹೊಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಯುವಕರು ಜನ ಸೇವೆಗೆ ಮುಂದೆ ಬರಬೇಕು. ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ 750 ಕೋಟಿ ರು. ಯೋಜನೆಯಾಗಿದ್ದು 384 ಹಳ್ಳಿಗಳಲ್ಲಿ ಓವರ್ ರೆಡ್ ಟ್ಯಾಂಕುಗಳು ನಿರ್ಮಾಣವಾಗಿವೆ. ಕೊಬ್ಬರಿ ಬೆಂಬಲ ಬೆಲೆಗೆ ಪ್ರಜ್ವಲ್ ರೇವಣ್ಣ ಅವರು ರೈತರಿಗೆ ಸ್ಪಂದಿಸಿದ್ದಾರೆ. ಇವರ ಸೇವೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಮುಖಂಡರಾದ ಅಣತಿ ಆನಂದ್, ಪರಮ ದೇವರಾಜೇಗೌಡ, ಮರಿ ದೇವೇಗೌಡ, ಬಿ.ಎಚ್.ಶಿವಣ್ಣ, ಅನಿಲ್, ಕುಂಬಾರಳ್ಳಿ ರಮೇಶ್, ಪುರುಷೋತ್ತಮ್, ಅಣತಿ ಶಿವಣ್ಣ, ಉದ್ಯಮಿ ಮಂಜುನಾಥ್, ವೆಂಕಟೇಶ್, ಓಬಳಾಪುರ ಬಸವರಾಜ್, ಶಿವಸ್ವಾಮಿ, ಮರವನಹಳ್ಳಿ ಬಾಲರಾಜ್, ಮೂಡನಳ್ಳಿ ಚಂದ್ರಣ್ಣ, ಮಡಬ ಜಗದೀಶ್, ರಾಮಚಂದ್ರು, ಶಿವರಾಜ್ ಹಾಜರಿದ್ದರು.

ಎಂ.ಶಿವರ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್. ಬಾಲಕೃಷ್ಣ, ಆನಂದ್ ಕುಮಾರ್ ಅವರನ್ನು ಕಾರ್ಯಕರ್ತರು ಅಭಿನಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ