ಕನ್ನಡಪ್ರಭ ವಾರ್ತೆ ಸಿಂಧನೂರು
ಬೆಳಗ್ಗೆಯಿಂದಲೇ ವಿವಿಧ ವಾರ್ಡ್‌ಗಳ ಮತದಾರರು ಕುಟುಂಬ ಸಮೇತ ಹಾಗೂ ತಂಡೋಪ ತಂಡವಾಗಿ ಮತಗಟ್ಟೆಗಳಿಗೆ ಬಂದು ಸ್ವಯಂಪ್ರೇರಿತರಾಗಿ ಮತ ಚಲಾಯಿಸಿದರು. ಮಹಿಳೆಯರು, ವೃದ್ಧ-ವೃದ್ಧೆಯರನ್ನು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರು ಆಟೋಗಳಲ್ಲಿ ಕರೆದುಕೊಂಡು ಬಂದು ಬೂತ್ ಸಂಖ್ಯೆಯ ಚೀಟಿ ಬರೆದುಕೊಟ್ಟು ತಮ್ಮ ಪಕ್ಷಕ್ಕೆ ಮತದಾನ ಮಾಡಲು ಮನವಿ ಮಾಡಿದರು. ಮತದಾರರು ಬಿಸಿಲಿನ ಸೆಕೆಯಿಂದ ಬೆವರು ಸುರಿಸುತ್ತಾ ಮತಗಟ್ಟೆ ಮುಂದೆ ನಿಂತು ಮತ ಹಾಕಿದರು. 4 ಗಂಟೆ ನಂತರ ಮಹಿಳೆಯರು, ವೃದ್ಧೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಹಲವಾರು ಯುವಕರು, ಯುವತಿಯರು ಮೊದಲ ಬಾರಿ ಮತ ಹಾಕಿ ಸಂಭ್ರಮಿಸಿದರು.
ಕ್ಷೇತ್ರದಾದ್ಯಂತ ಸ್ಥಾಪಿಸಲ್ಪಟ್ಟ 269 ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ, ಎಪಿಆರ್‌ಒ ಸೇರಿ ಐದು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆಯಿಂದ ನೂರು ಮೀಟರ್ ಅಂತರದಲ್ಲಿ ಜನಸಂಚಾರ ನಿಷೇಧ ಮಾಡಲಾಗಿತ್ತು. ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಶಾಂತಿಯುತ ಮತದಾನಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.