ಕನ್ನಡಪ್ರಭ ವಾರ್ತೆ ಮಣಿಪಾಲ
ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಸ್ಕಿಲ್ ಕೌನ್ಸಿಲ್ (ಟಿಎಚ್‌ಎಸ್‌ಸಿ)ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜನ್ ಬಹದೂರ್ ಅವರು ಕೇಂದ್ರವನ್ನು ಉದ್ಘಾಟಿಸಿ, ನಾವಿಂದು ಆತಿಥೇಯ ಉದ್ಯಮದ ನಿರ್ಣಾಯಕ ಕಾಲದಲ್ಲಿ ಇದ್ದೇವೆ. ಈ ಕ್ಷೇತ್ರದಲ್ಲಿ ಕೌಶಲಪೂರ್ಣ ವೃತ್ತಿಪರರ ಅಗತ್ಯ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸುವಲ್ಲಿ ವಾಗ್ಶದಂಥ ಸಂಸ್ಥೆಯು ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುವುದರ ಮೂಲಕ ಪ್ರಧಾನ ಪಾತ್ರ ವಹಿಸುತ್ತಿದೆ ಎಂದರು.
ಮಾಹೆಯ ಸಹಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಅವರು ಟಿಎಚ್‌ಎಸ್‌ಸಿ ಮತ್ತು ಎನ್‌ಎಸ್‌ಡಿಸಿ ಸಂಸ್ಥೆಗಳು ವಾಗ್ಶವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮಾನ್ಯತೆ ಮಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.ವಾಗ್ಶದ ಪ್ರಾಂಶುಪಾಲ ಚೆಫ್ ಕೆ. ತಿರುಗ್ನಾನ ಸಂಬಂಧಂ ಅವರು, ವಾಗ್ಶಕ್ಕೆ ಟಿಎಚ್‌ಎಸ್‌ಸಿ -ಎನ್‌ಎಸ್‌ಡಿಎಸ್ ಮಾನ್ಯತೆಯು ಕರ್ನಾಟಕದ ಆತಿಥ್ಯ ಕ್ಷೇತ್ರದಲ್ಲಿ ಯುವಕರಿಗೆ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದರು.
ಒಂದು ವರ್ಷದ ಕೋರ್ಸ್:ಈ ನೂತನ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ 6 ತಿಂಗಳು ಬೋಧನೆ ಮತ್ತು ಪ್ರಾಯೋಗಿಕ ತರಗತಿಗಳು ಮತ್ತು ಉಳಿದ ಆರು ತಿಂಗಳಿನಲ್ಲಿ ಉದ್ಯೋಗಪೂರ್ವ ಶಿಕ್ಷಣ [ಇಂಟರ್ನ್‌ಶಿಪ್] ದ ಮೂಲಕ ಅನುಭವ ಪಡೆಯಲು ಅವಕಾಶವಿದೆ. ಇಂಟರ್ನ್‌ಶಿಪ್‌ನ ಅವಧಿಯಲ್ಲಿ ವಿದ್ಯಾರ್ಥಿಗಳು ಹೊಟೇಲ್ ನಿರ್ವಹಣೆಯ ನೇರ ಅನುಭವವನ್ನು ಪಡೆಯಲಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಆತಿಥೇಯ ಶಿಕ್ಷಣದಲ್ಲಿ ಪ್ರಾವೀಣ್ಯವನ್ನು ಪಡೆದ ದ್ಯೋತಕವಾಗಿ ಟಿಎಚ್‌ಎಸ್‌ಸಿ ಮತ್ತು ಡಬ್ಲ್ಯುಜಿಎಸ್‌ಎಚ್‌ಎ [ವಾಗ್ಶ] ದಿಂದ ಜಂಟಿಯಾಗಿ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.