ಗಗನಕ್ಕೇರಿದ ತರಕಾರಿ ದರ, ಗ್ರಾಹಕರಿಗೆ ಗಾಯದ ಮೇಲೆ ಮತ್ತಷ್ಟು ಹೊರೆ...!

KannadaprabhaNewsNetwork |  
Published : Jan 03, 2024, 01:45 AM IST
ಸಿಕೆಬಿ-1 ಚಿಕ್ಕಬಳ್ಳಾಪುರ ಎಪಿಎಂಸಿಯ ತರಕಾರಿ ಅಂಗಡಿ  | Kannada Prabha

ಸಾರಾಂಶ

ನೀರಿನ ಕೊರತೆಯಿಂದಾಗಿ ತರಕಾರಿ ಬೆಳೆ ಕುಸಿತ, ದಿನಸಿ ವಸ್ತುಗಳ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕಗೆ ಮತ್ತೊಂದು ಬರೆ, ಮಾಂಸ ಬೆಲೆಯೂ ಹೆಚ್ಚಳ, ನಿಂಬೆಹಣ್ಣಿನ ದರ ಗಗನಕ್ಕೆ, ದಿನದಿಂದ ದಿನಕ್ಕೆ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಈ ಮೂಲಕ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ದಯಾಸಾಗರ್‌ ಎನ್‌.ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ಗ್ರಾಹಕರಿಗೆ ದಿನೇ ದಿನೇ ಹೆಚ್ಚಾಗುತ್ತಿರುವ ತರಕಾರಿ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರಿನ ಕೊರತೆಯಿಂದಾಗಿ ತರಕಾರಿ ಬೆಳೆ ಪ್ರಮಾಣ ಕುಸಿದಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಕಳೆದ ಎರಡ್ಮೂರು ವಾರಗಳಿಂದ ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಇದರಿಂದಾಗಿ ಜನರಿಗೆ ತರಕಾರಿ ಖರೀದಿಸುವುದೇ ಕಷ್ಟವಾಗಿದೆ.

ವಿವಿಧ ತರಕಾರಿ ದರ ಹೆಚ್ಚಳ

ಜಿಲ್ಲೆಯಲ್ಲಿ ಟೊಮೇಟೋ ಬೆಲೆ ಮತ್ತೆ ಹೆಚ್ಚಾಗಿದ್ದು, ಕಳೆದ ವಾರ ಪ್ರತಿ ಕಿಲೋ ಟೊಮೆಟೋ 40 ರುಪಾಯಿ ಇತ್ತು. ಈ ವಾರ ಪ್ರತಿ ಕಿಲೋ ಟೊಮೇಟೊ 50 ರುಪಾಯಿಗೆ ಮಾರಾಟವಾಗುತ್ತಿದ್ದು, 10 ರು. ಹೆಚ್ಚಾಗಿದೆ. ಹೀರೇಕಾಯಿ 30ರಿಂದ 50ರೂಗೆ ಜಿಗಿದಿದೆ. ಬೆಂಡೆಕಾಯಿ 70ರಿಂದ 80 ರೂ ಆಗಿದೆ. ಹಾಗಲಕಾಯಿ 50 ರೂ ಇದೆ. ಸವತೆಕಾಯಿ 30ರಿಂದ 40ರೂ ಆಗಿದೆ. ಮೆಣಸಿನಕಾಯಿ 60ರಿಂದ 100 ಆಗಿದೆ. ಬೀನ್ಸ್ 50ರಿಂದ 60 ರೂ ಆಗಿದೆ. ಆಲೂಗಡ್ಡೆ 20 ರಿಂದ 40ರೂ ಆಗಿದೆ. ಈರುಳ್ಳಿ 20ರಿಂದ 60 ರೂ ಆಗಿದೆ. ಬೆಳ್ಳುಳ್ಳಿ 200ರಿಂದ 300 ರೂ ಆಗಿದೆ. ಬದನೆಕಾಯಿ, 50ರೂ ಯಿಂದ 80 ರೂ ಆಗಿದೆ. ಕ್ಯಾರೆಟ್ 30 ರಿಂದ 40, ಬಿಟ್ ರೂಟ್ 40 ರಿಂದ 50,ಮೂಲಂಗಿ 40 ರೂ, ನುಗ್ಗೇ ಕಾಯಿ 100 ರಿಂದ 180 ರೂ ಆಗಿದೆ.

ಮಳೆಯಾದರೆ ಬೆಲೆ ಇಳಿಕೆ

ತರಕಾರಿ ಬೆಲೆ ಹೆಚ್ಚಳಕ್ಕೆ ಈ ಸಾಲಿನ ಮಳೆಯ ಕೊರತೆಯೇ ಕಾರಣವಾಗಿದ್ದು, ಮಳೆಯಾಗಿದ್ದಿದ್ದರೆ ದಿಢೀರನೆ ತರಕಾರಿ ಬೆಲೆ ಇಳಿಕೆಯಾಗುತ್ತಿತ್ತು. ಮಳೆಯಾಗದೇ ಇರುವುದರಿಂದ ಬೇಡಿಕೆಗೆ ಅಗತ್ಯವಾದಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಹೆಚ್ಚಳವಾಗಿದೆ. ಇರುವ ಅಲ್ಪಸ್ವಲ್ಪ ತರಕಾರಿಗಳಿಗೂ ಬೇಡಿಕೆ ಹೆಚ್ಚಾಗಿದ್ದರಿಂದ ಅವುಗಳ ಬೆಲೆಗಳು ಕೂಡ ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ.

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ಶಾಕ್ ಎದುರಾಗಿದ್ದು, ಕೋಳಿ ಮಾಂಸ, ಹಣ್ಣು, ತರಕಾರಿ, ಸೊಪ್ಪಿನ ಬೆಲೆ ಗಗನಕ್ಕೇರಿದೆ. ಈ ಮೂಲಕ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಮಾಂಸ ಬೆಲೆಯೂ ಹೆಚ್ಚಳ

ಮಾಂಸ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೋಳಿ ಮತ್ತು ಮೊಟ್ಟೆಯ ಬೆಲೆ ಹೆಚ್ಚಿರುವ ಕಾರಣ ಮಾಂಸಹಾರಿಗಳೂ ತರಕಾರಿಯತ್ತ ಮುಖ ಮಾಡಿದ್ದಾರೆ. ಇದೂ ಸಹ ತರಕಾರಿ ದರ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಸರಿಯಾಗಿ ಮಳೆಯಾಗದ ಹಿನ್ನೆಲೆ, ತರಕಾರಿ ಜತೆ ಸೊಪ್ಪಿನ ಬೆಲೆಯಲ್ಲೂ ಮತ್ತಷ್ಟು ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಮಾರುಕಟ್ಟೆಯಲ್ಲಿ ಕೆ.ಜಿ ಗೆ 100 ರೂ. ದಾಟಿದೆ.

ಇನ್ನೂ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಸೇಬು, ದಾಳಿಂಬೆ ಕೆಜಿಗೆ 100 ರಿಂದ 180 ರೂ. ದಾಟಿದ್ದರೆ, ಕಿತ್ತಳೆ ಹಣ್ಣು 50 ರಿಂದ 100ರೂ ವರೆಗೆ ದೊರೆಯುತ್ತಿದ್ದು, ಮೂಸಂಬಿ, ಸಪೋಟ, ಖರ್ಜೂರ, ಕಲ್ಲಂಗಡಿ, ಅನಾನಸ್ ಹಣ್ಣುಗಳ ದರವೂ ಏರಿಕೆಯಾಗಿದೆ.

ನಿಂಬೆಹಣ್ಣಿನ ದರ ಗಗನಕ್ಕೆ

ನಿಂಬೆ ಹಣ್ಣಿನ ಬೆಲೆಯು ಸಹ ಗಗನಕ್ಕೇರಿದೆ. 1 ಸಾವಿರ ನಿಂಬೆಹಣ್ಣಿನ ಸಗಟು ಬೆಲೆ ಈಗ 4,000 ರೂ.ನಿಂದ 5,000 ರೂ.ವರೆಗೆ ಇದೆ ಆದರೆ ಕೆಲವು ತಿಂಗಳ ಹಿಂದೆ 2,500 ರೂ.ನಿಂದ 3,000 ರೂ ಇತ್ತು. ನಿಂಬೆಹಣ್ಣಿನ ಚಿಲ್ಲರೆ ದರವೂ ಏರಿಕೆಯಾಗಿದ್ದು ಈಗ ರಾಜ್ಯದ ಕೆಲವೆಡೆ ಪ್ರತಿ ನಿಂಬೆಹಣ್ಣು 7 ರಿಂದ 8 ರೂ.ಗೆ ಮಾರಾಟವಾಗುತ್ತಿದೆ. ಇನ್ನೂ ಕೆಲವುಕಡೆಗಳಲ್ಲಿ 10 ರೂ.ವರೆಗೂ ತಲುಪಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ