ಉಪ್ಪಿನಂಗಡಿ: ಒಂದು ರಾಷ್ಟ್ರ ಒಂದೇ ಪ್ರಕಾರದ ಶಿಕ್ಷಣ ನೀತಿ ಜಾರಿಯಾಗಬೇಕು. ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಲು ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸರ್ಕಾರಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಸ್ಮಾರ್ಟ್ ಬೋರ್ಡನ್ನು ಒದಗಿಸುವ ಯೋಜನೆಯನ್ನು ಅನುಷ್ಠಾನಿಸಲಾಗಿದೆ ಎಂದು ಯುವ ಬೆಂಗಳೂರು ಟ್ರಸ್ಟ್ ಸಂಸ್ಥಾಪಕ ಕಿರಣ್ ಸಾಗರ್ ತಿಳಿಸಿದರು. ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆಗೆ ಗುರುವಾರ ಸ್ಮಾರ್ಟ್ ಬೋರ್ಡನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು.
೧೮೩೬ ನೇ ಇಸವಿಯಲ್ಲಿ ಸ್ಥಾಪನೆ ಕಂಡ ಉಪ್ಪಿನಂಗಡಿಯ ಈ ಸರ್ಕಾರಿ ಮಾದರಿ ಶಾಲೆಗೆ ಇದೀಗ ೧೯೦ ವರ್ಷ ಪೂರ್ಣವಾಗಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಸ್ಮಾರ್ಟ್ ಬೋರ್ಡ್ ಲಭಿಸಿರುವುದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಶಾಲಾ ಮುಖ್ಯಗುರು ಹನುಮಂತಯ್ಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್, ಶಾಲಾಭಿವೃದ್ಧಿ ಸಮಿತಿಯ ಕಲಂದರ್ ಶಾಪಿ, ತಾರಾನಾಥ್, ಕೈರುನ್ನೀಸಾ, ಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಂತೋಷ್ ಸ್ವಾಗತಿಸಿದರು.