ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥ ನಡೆಯುವ ಲೋಕಸಿರಿ ತಿಂಗಳ ಅತಿಥಿ -106 ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು.
ಗೌರವ ಅತಿಥಿಗಳಾಗಿದ್ದ ಪತ್ರಕರ್ತ ಓದೇಶ ಸಕಲೇಸಪುರ ಮಾತನಾಡಿ, ಜಾನಪದ ಲೋಕಕ್ಕೆ ಬಂದರೆ ಮತ್ತೆ ನಮ್ಮ ಮೂಲ ನೆಲೆ ಹಳ್ಳಿಗೆ ಹೋಗಿ ಬಂದಂತಾಗುತ್ತದೆ. ಪ್ರತಿ ಮನೆ, ಹಳ್ಳಿಯ ಅಡುಗೆ ರುಚಿ ಬದಲಾದಂತೆ, ಪ್ರತಿ ಜಿಲ್ಲೆಯ ಸಂಸ್ಕೃತಿ ಕಲಾ ಪ್ರಕಾರಗಳು ವಿಭಿನ್ನ ವಿಶಿಷ್ಟ. ಜಾನಪದ ಲೋಕ ನಾಡಿನ ಸಮಗ್ರ ಚಿತ್ರಣವನ್ನು ನೀಡುವ ಕಲಾಕೇಂದ್ರವಾಗಿ ವಿಶೇಷತೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದರಾದೆ ಹುಚ್ಚಮ್ಮರವರು 12ನೇ ವಯಸ್ಸಿಗೆ ಹಾಡುವುದನ್ನು ನಮ್ಮ ಚಿಕ್ಕಮ್ಮನಿಂದ ಕಲಿತೆ. ಕಲಿತ ಕಲೆಯನ್ನು ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳಿಗೆ ಕಲಿಸುತ್ತಿರುವೆ ಎಂದು ಮಾತು ಆರಂಭಿಸಿ, ಬಂಜೆ ಹೊನ್ನಮ್ಮನ ಗೀತೆ, ಸೋಬಾನೆ ಪದ, ಜರಿಯುವ ಪದ, ತಿಂಗಳುಮಾಮನ ಪದ, ಬೀಸುವ ಕಲ್ಲಿನ ಪದ, ಕುಟ್ಟುವ ಪದ, ಕೋಲಾಟದ ಹಾಡುಗಳನ್ನು ಹಾಡಿ ರಂಜಿಸಿದರು.ಒಮ್ಮೆ ಮದುವೆಯೊಂದರಲ್ಲಿ ಜರಿಯುವ ಪದವನ್ನು ಹಾಡಿದಾಗ ಗಂಡು ಮುನಿಸಿಕೊಂಡು ಹೋದ ಪ್ರಸಂಗವನ್ನು ಸ್ವಾರಸ್ಯಕರವಾಗಿ ನಿರೂಪಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಇದೇ ಸಂದರ್ಭದಲ್ಲಿ ಪುಟ್ಟಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಲಕ್ಷ್ಮಿನರಸಮ್ಮ, ಹೊನ್ನಮ್ಮ, ಹುಚ್ಚಮ್ಮನ ಜೊತೆ ಹಾಡಿಗೆ ದನಿಯಾದರು. ಕ್ಯೂರೇಟರ್ ಡಾ.ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.
-------------------------------
16ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಾನಪದ ಲೋಕದಲ್ಲಿ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು.
------------------------------